ದುಶ್ಚಟ, ಆನ್‌ಲೈನ್‌ ಜೂಜಾಟದ ಸಾಲ ತೀರಿಸಲು ಒಂಟಿ ವೃದ್ಧೆಯರ ಗುರಿಯಾಗಿಸಿ ಸರ ಕಸಿಯುತ್ತಿದ್ದ ಕಳ್ಳನ ಬಂಧನ

KannadaprabhaNewsNetwork |  
Published : Sep 21, 2024, 01:55 AM ISTUpdated : Sep 21, 2024, 04:47 AM IST
ಸರಗಳ್ಳತನ | Kannada Prabha

ಸಾರಾಂಶ

ದುಶ್ಚಟ, ಆನ್‌ಲೈನ್‌ ಜೂಜಾಟದ ಸಾಲ ತೀರಿಸಲು ಒಂಟಿ ವೃದ್ಧೆಯರ ಸರ ಕದಿಯುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ರಸ್ತೆಯಲ್ಲಿ ಓಡಾಡುವ ಒಂಟಿ ವೃದ್ಧೆಯರನ್ನು ಹಿಂಬಾಲಿಸಿ ಸರ ಎಗರಿಸುತ್ತಿದ್ದ ಸುಲಿಗೆಕೋರನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಮಾಕ್ಷಿಪಾಳ್ಯ ನಿವಾಸಿ ಸುರೇಶ್‌(29) ಬಂಧಿತ. ಇತ್ತೀಚೆಗೆ ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತ ಏಕಾಏಕಿ ವೃದ್ಧೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಘಟನಾ ಸ್ಥಳ ಸೇರಿದಂತೆ ಹಲವೆಡೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಆರೋಪಿಯ ಸುಳಿವು ಸಿಕ್ಕಿದೆ. ಮತ್ತೆ ಸರಗಳವು ಮಾಡಲು ಹೊಂಚು ಹಾಕುತ್ತಿದ್ದ ಆರೋಪಿ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ದುಶ್ಚಟಗಳಿಂದ ವಿಪರೀತ ಸಾಲ

ತುಮಕೂರು ಮೂಲದ ಆರೋಪಿ ಸುರೇಶ್‌, ಡಿಪ್ಲೊಮಾ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಕಳೆದ ಸುಮಾರು ಹತ್ತು ವರ್ಷಗಳಿಂದ ಪೋಷಕರ ಜತೆಗೆ ಕಾಮಾಕ್ಷಿಪಾಳ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆನ್‌ಲೈನ್‌ ಜೂಜು ಸೇರಿದಂತೆ ದುಶ್ಚಟಗಳಿಗೆ ದಾಸನಾಗಿದ್ದು, ಕೆಲಸಕ್ಕೆ ಹೋಗುತ್ತಿರಲಿಲ್ಲ. ಜೂಜು ಹಾಗೂ ಕೆಟ್ಟ ಹವ್ಯಾಸಗಳಿಂದ ವಿಪರೀತ ಸಾಲ ಮಾಡಿಕೊಂಡಿದ್ದ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸರಳ್ಳತನಕ್ಕೆ ಇಳಿದಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಪಾರ್ಕ್‌ಗಳಲ್ಲಿ ರಾತ್ರಿ ನಿದ್ದೆ

ಆರೋಪಿಯು ಮೊಬೈಲ್‌ ಬಳಸುತ್ತಿರಲಿಲ್ಲ. ಇತ್ತೀಚೆಗೆ ಮನೆಗೂ ಹೋಗುತ್ತಿರಲಿಲ್ಲ. ಪಾರ್ಕ್‌ಗಳು ಸೇರಿದಂತೆ ಕಟ್ಟಡಗಳಲ್ಲಿ ರಾತ್ರಿ ಮಲಗುತ್ತಿದ್ದ. ಸಂಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಯು, ಮುಖ ಕಾಣದ ಹಾಗೆ ಹೆಲ್ಮೆಟ್‌ ಧರಿಸಿ, ನಗರದ ವಿವಿಧೆಡೆ ಓಡಾಡುತ್ತಿದ್ದ. ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವ ವೃದ್ಧೆಯರನ್ನು ಹಿಂಬಾಲಿಸಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ.

ಆರೋಪಿಯ ಬಂಧನದಿಂದ ಸಂಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಒಂದು ದ್ವಿಚಕ್ರ ವಾಹನ ಕಳವು, ರಾಜರಾಜೇಶ್ವರಿನಗರ ಠಾಣೆಯಲ್ಲಿ ದಾಖಲಾಗಿದ್ದ ಸರಗಳವು ಹಾಗೂ ಸರಗಳವಿಗೆ ಯತ್ನ ಸೇರಿ ಮೂರು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಮಹಿಳೆಯರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು
ನಾಯಿ ರಕ್ಷಣೆಗೆ ರಸ್ತೆ ಬದಿ ನಿಂತಿದ್ದ ಯುವತಿ ಮೈಮುಟ್ಟಿ ಇಂಜಿನಿಯರ್‌ ದುರ್ವರ್ತನೆ : ಬಂಧನ