ಕನ್ನಡಪ್ರಭ ವಾರ್ತೆ ಬೆಂಗಳೂರು
ಜಾತ್ರೆ ಹಾಗೂ ದೇವರ ಉತ್ಸವ ಸೇರಿದಂತೆ ಶುಭ ಸಮಾರಂಭಗಳಲ್ಲಿ ವೃದ್ಧರಿಂದ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಮಹಿಳೆಯರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡನಾಗಮಂಗಲದ ಜ್ಯೋತಿ ಹಾಗೂ ಆಶಾ ಬಂಧಿತರಾಗಿದ್ದು, ಆರೋಪಿಗಳಿಂದ ₹16 ಲಕ್ಷ ಮೌಲ್ಯದ 233 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ರಾಜಾಜಿನಗರ ಸಮೀಪದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಡೆದ ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದ ಪಾರ್ವತಮ್ಮ ಎಂಬುವರಿಂದ ₹1.4 ಲಕ್ಷ ಮೌಲ್ಯದ 32 ಗ್ರಾಂ ಚಿನ್ನದ ಸರ ಕಳ್ಳತನವಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡು ಮೂಲದ ಜ್ಯೋತಿ ಹಾಗೂ ಆಶಾ, ಹಲವು ದಿನಗಳಿಂದ ದೊಡ್ಡನಾಗಮಂಗಲದ ಬಳಿ ನೆಲೆಸಿದ್ದರು. ಈ ಪೈಕಿ ಜ್ಯೋತಿ ವೃತ್ತಿಪರ ಕ್ರಿಮಿನಲ್ ಆಗಿದ್ದು, 2009ರಲ್ಲಿ ಆಕೆಯನ್ನು ಮನೆಗಳ್ಳತನ ಪ್ರಕರಣಗಳಲ್ಲಿ ಶಂಕರಪುರ ಹಾಗೂ ಆನೇಕಲ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಜೈಲಿನಿಂದ ಹೊರ ಬಂದ ನಂತರ ಆಕೆ ತನ್ನ ಚಾಳಿ ಮುಂದುವರೆಸಿದ್ದಳು. ಜಾತ್ರೆ, ದೇವರ ಉತ್ಸವ ಹಾಗೂ ಶುಭ ಸಮಾರಂಭದಲ್ಲಿ ಜನ ಸಂದಣಿಯಲ್ಲಿ ವಯಸ್ಸಾದವರನ್ನು ಆರೋಪಿಗಳು ಗುರಿಯಾಗಿಸಿಕೊಂಡು ಚಿನ್ನಾಭರಣ ದೋಚುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.