ಹ್ಯಾಂಡಲ್‌ ಲಾಕ್‌ ಮುರಿದು ನಗರದ ವಿವಿಧೆಡೆ ಬೈಕ್‌ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಸೆರೆ

KannadaprabhaNewsNetwork | Updated : Nov 30 2024, 04:43 AM IST

ಸಾರಾಂಶ

ನಗರದ ವಿವಿಧೆಡೆ ಬೈಕ್‌ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ನಗರದ ವಿವಿಧೆಡೆ ಬೈಕ್‌ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನ ಗೋವಿಂದರಾಜು(49) ಮತ್ತು ನಂದಿನಿ ಲೇಔಟ್‌ನ ಪ್ರಭು(29) ಬಂಧಿತರು. ಆರೋಪಿಗಳಿಂದ 6.50 ಲಕ್ಷ ರು. ಮೌಲ್ಯದ 21 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಕುರುಬರಹಳ್ಳಿ ನಿವಾಸಿಯೊಬ್ಬರು ಕಳೆದ ಸೆ.22ರಂದು ಮಹಾಲಕ್ಷ್ಮೀ ಲೇಔಟ್‌ನ 15ನೇ ಮುಖ್ಯರಸ್ತೆಯಲ್ಲಿ ಬೈಕ್‌ ನಿಲುಗಡೆ ಮಾಡಿ ಗಣೇಶ ಮೆರವಣಿಗೆ ನೋಡಲು ತೆರಳಿದ್ದರು. ವಾಪಾಸ್‌ ಬಂದು ನೋಡಿದಾಗ ಬೈಕ್‌ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಗೊರಗುಂಟೆಪಾಳ್ಯದ ತಾಜ್‌ ಹೋಟೆಲ್‌ ಬಳಿ ಆರೋಪಿ ಗೋವಿಂದರಾಜುನನ್ನು ಬೈಕ್‌ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳವು ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಂತೆಯೇ ನಗರದ ವಿವಿಧೆಡೆ ಬೈಕ್‌ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

21 ದ್ವಿಚಕ್ರ ವಾಹನ ಜಪ್ತಿ: ಆರೋಪಿಯು ಹೆಚ್ಚಿನ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ನಂದಿನಿ ಲೇಔಟ್‌ನ ಜೈ ಮಾರುತಿನಗರದ ಮನೆಯೊಂದರ ಬಳಿ ನಿಲುಗಡೆ ಮಾಡಿದ್ದ 8 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ತಾನು ಕಳವು ಮಾಡಿದ್ದ ಬೈಕ್‌ಗಳನ್ನು ಸಹಚರನಿಗೆ ನೀಡಿದ್ದಾಗಿ ನೀಡಿದ ಮಾಹಿತಿ ಮೇರೆಗೆ ಪ್ರಭುನನ್ನು ವಶಕ್ಕೆ ಪಡೆದು ಆತನದಿಂದ 7 ಬೈಕ್‌ ಹಾಗೂ ಗಿರಾಕಿಗಳಿಗೆ ಮಾರಾಟ ಮಾಡಿದ್ದ 5 ಬೈಕ್‌ ಸೇರಿ ಇಬ್ಬರು ಆರೋಪಿಗಳಿಂದ ಒಟ್ಟು 21 ಬೈಕ್‌ ಜಪ್ತಿ ಮಾಡಲಾಗಿದೆ.

ಹ್ಯಾಂಡಲ್‌ ಲಾಕ್ ಮುರಿದು ಕಳವು: ಆರೋಪಿಗಳು ರಾತ್ರಿ ವೇಳೆ ನಗರ ಹಾಗೂ ನಗರದ ಹೊರವಲಯದ ವಿವಿಧೆಡೆ ಸುತ್ತಾಡಿ ಮನೆ ಎದುರು, ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಬೈಕ್‌ ಗುರಿಯಾಗಿಸಿ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ಬಳಿಕ ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

12 ಬೈಕ್‌ ಕಳವು ಪ್ರಕರಣ ಪತ್ತೆ: ಆರೋಪಿಗಳಿಂದ ಬಂಧನದಿಂದ ಮಹಾಲಕ್ಷ್ಮೀ ಲೇಔಟ್‌ನ 4, ಮಾಗಡಿ ರಸ್ತೆ ಠಾಣೆ ಎರಡು, ಮಾದನಾಯಕನಹಳ್ಳಿ, ಪೀಣ್ಯ, ರಾಜಗೋಪಾಲನಗರ, ದಾಬಸ್‌ಪೇಟೆ, ಕಾಮಾಕ್ಷಿಪಾಳ್ಯ ಗೋವಿಂದರಾಜನಗರ ಠಾಣೆಯಲ್ಲಿ ತಲಾ 1 ಸೇರಿ ಒಟ್ಟು 12 ಬೈಕ್‌ ಕಳವು ಪ್ರಕರಣಗಳು ಪತ್ತೆಯಾಗಿವೆ.

Share this article