ಬೀಗ ಹಾಕಿದ ಮನೆಗಳಲ್ಲಿ ಕಳವು ಮಾಡುತ್ತಿದ್ದ ನೆರೆ ರಾಜ್ಯದ ಮೂವರ ಬಂಧನ

KannadaprabhaNewsNetwork |  
Published : May 29, 2025, 01:30 AM ISTUpdated : May 29, 2025, 04:21 AM IST
arrest

ಸಾರಾಂಶ

ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಹೊರರಾಜ್ಯದ ಮೂವರು ಆರೋಪಿಗಳನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಹೊರರಾಜ್ಯದ ಮೂವರು ಆರೋಪಿಗಳನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುನೆಲಿವೇಲಿ ಮೂಲದ ದಿನಕರನ್‌(38), ಪಾಂಡಿಚೇರಿ ಮೂಲದ ರಘುರಾಮ್‌(32) ಹಾಗೂ ತಿರುವಾರೂರ್‌ ಮೂಲದ ಆರ್ಮುಗಂ(55) ಬಂಧಿತರು. ಆರೋಪಿಗಳಿಂದ 50 ಲಕ್ಷ ರು. ಮೌಲ್ಯದ 550 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕಳೆದ ಮಾರ್ಚ್‌ 4ರಂದು ಕುಂದಲಹಳ್ಳಿಯ ಎಇಸಿಎಸ್‌ ಲೇಔಟ್‌ ನಿವಾಸಿ ಕಮಲ್‌ ಚರಣ್‌ ಎಂಬುವವರು ಕಾರ್ಯ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಚೆನ್ನೈಗೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಯ ಕಿಟಕಿ ಗ್ರಿಲ್‌ ಮುರಿದು ಒಳ ಪ್ರವೇಶಿಸಿ ಬೀರುವಿನಲ್ಲಿದ್ದ ಮೂರು ಲಕ್ಷ ರು. ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದರು. ಮಾ.6ರ ರಾತ್ರಿ ಕಮಲ್‌ ಚರಣ್‌ ಚೆನ್ನೈನಿಂದ ಮನೆಗೆ ವಾಪಾಸ್‌ ಆದಾಗ ಕಳವು ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ನೆರೆಯ ತಮಿಳುನಾಡಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ಮಾಹಿತಿ ಕಲೆಹಾಕಿ ತಮಿಳುನಾಡಿನ ಶಿಕಾರಿಪಾಳ್ಯದ ಆಟೋ ನಿಲ್ದಾಣದ ಬಳಿ ಆರೋಪಿ ದಿನಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ವೇಳೆ ಇಬ್ಬರು ಸಹಚರರೊಂದಿಗೆ ಸೇರಿ ಈ ಕೃತ್ಯ ಎಸೆಗಿದ್ದಾಗಿ ಹೇಳಿದ್ದಾನೆ.

ಈ ಮಾಹಿತಿ ಮೇರೆಗೆ ತಮುಳುನಾಡಿನ ತಿರುವಾರೂರ್‌ನಲ್ಲಿ ಆರೋಪಿಗಳಾದ ರಘುರಾಮ್‌ ಮತ್ತು ಆರ್ಮುಗಂನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಮನೆಗಳವು ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 550 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ಮನೆಗಳವು ಪ್ರಕರಣ ಪತ್ತೆಯಾಗಿದೆ. 

ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ವೃತ್ತಿಪರ ಕಳ್ಳರು:ಬಂಧಿತ ಮೂವರು ಆರೋಪಿಗಳ ಪೈಕಿ ಕ್ಯಾಬ್‌ ಚಾಲಕನಾಗಿರುವ ದಿನಕರನ್‌ ಮತ್ತು ರಘುರಾಮ್‌ ವೃತ್ತಿಪರ ಕಳ್ಳರಾಗಿದ್ದಾರೆ. ದಿನಕರನ್‌ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಂಟು ಹಾಗೂ ಆರೋಪಿ ರಘುರಾಮ್‌ ವಿರುದ್ಧ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಆರ್ಮುಗಂ ಕಳವು ಮಾಲು ಸ್ವೀಕರಿಸಿ ವಿಲೇವಾರಿ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

PREV
Read more Articles on

Recommended Stories

ಬೆಂಗಳೂರು- ಜಲಸೂರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅರ್ಚಕ ಸಾವು
ಸುರಂಗ ಮಾರ್ಗ : ಜಿಎಸ್‌ಐ ಅಭಿಪ್ರಾಯ ಪಡೆಯಲು ಹೈಕೋರ್ಟ್‌ ಸೂಚನೆ