ಆನೇಕಲ್ : ಪೊಲೀಸ್ ಪೇದೆಯ ಪುತ್ರನ ಮೇಲೆ ಪೊಲೀಸರೇ ಹಲ್ಲೆ ನಡೆಸಿದ್ದು, ಇದನ್ನು ಪ್ರಶ್ನಿಸಿದ ತಂದೆಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಗೂಂಡಾ ವರ್ತನೆ ಮೆರೆದ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಅತ್ತಿಬೆಲೆ ಠಾಣೆಯ ಪೇದೆ ಮೇಲೆ ಮತ್ತು ಈತನ ಮಗ ಹಲ್ಲೆಗೆ ಒಳಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರ ಠಾಣೆ ಪೊಲೀಸರ ಗೂಂಡಾವರ್ತನೆ ಬಗ್ಗೆ ಉನ್ನತ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ದೂರು ನೀಡಿದ್ದರೂ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ಗೋವಿಂದರಾಜನಗರ ಠಾಣೆಯ 8 ಪೊಲೀಸರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಇನೋವಾ ಮತ್ತು ಸ್ವಿಫ್ಟ್ ಕಾರಿನಲ್ಲಿ ಗೋವಿಂದರಾಜನಗರ ಠಾಣೆ ಪೊಲೀಸರು ತಮಿಳುನಾಡಿನಲ್ಲಿನ ಪ್ರಕರಣವೊಂದರ ಬಂದಿದ್ದರು. ಆರೋಪಿಯ ಸಹಿತ ಅತ್ತಿಬೆಲೆ ಟೋಲ್ ಬಳಿ ಕಾರುಗಳನ್ನು ನಿಲ್ಲಿಸಿಕೊಂಡಿದ್ದರು ಎನ್ನಲಾಗಿದೆ.
ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಪೇದೆಯ ಪುತ್ರ ಸಮೀಪದ ಬೇಕರಿಯಲ್ಲಿ ಹಾಲು ಕೊಳ್ಳಲು ಮುಂದಾಗಿದ್ದಾನೆ. ತಮ್ಮ ವ್ಯಾಪ್ತಿಯಲ್ಲದಿದ್ದರೂ ಬೈಕ್ ಅಡ್ಡಗಟ್ಟಿ ದಾಖಲಾತಿ ಪರಿಶೀಲಸಬೇಕೆಂದು ಗೋವಿಂದರಾಜನಗರ ಪೊಲೀಸರು ತಗಾದೆ ತೆಗೆದಿದ್ದಾರೆ. ಮಗನ ದ್ವಿಚಕ್ರ ವಾಹನದ ಹಿಂಬದಿ ಪ್ಲೇಟಿನಲ್ಲಿ ಸ್ವಲ್ಪ ಸಂಖ್ಯೆಗಳು ಕಾಣದಿದ್ದನ್ನು ಪ್ರಶ್ನೆ ಮಾಡಿದ್ದರು. ‘ತಪ್ಪಾಗಿದೆ ಸರ್ ಸರಿ ಮಾಡ್ಸೋಕೋತೀನಿ. ನಮ್ಮಪ್ಪ ಸಹ ಪೊಲೀಸ್’ ಎಂದು ಆತನ ಮನವಿ ಮಾಡಿದರೂ ಆತನ ಮೇಲೆ ಹಲ್ಲೆ ನಡೆಸಿದರು. ವಿಷಯ ತಿಳಿದು ಧಾವಿಸಿ ಬಂದ ಪೇದೆ ಮೇಲೆಯೂ ಹಲ್ಲೆ ನಡೆಸಿ ಅವಾಚ್ಯ ಪದಗಳ ನಿಂದಿಸಿದ್ದಾರೆ. ಬಳಿಕ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಅತ್ತಿಬೆಲೆ ಠಾಣೆಗೆ ಬಂದಿದ್ದಾರೆ.
ಒಂದು ಹಂತದಲ್ಲಿ ಕೊಲೆ ಮಾಡುವುದಾಗಿ ಪೇದೆಗೆ ಗೋವಿಂದರಾಜನಗರ ಠಾಣೆ ಪೊಲೀಸರು ಬೆದರಿಕೆ ಹಾಕಿದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲು ಅತ್ತಿಬೆಲೆ ಪೊಲೀಸರ ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಪೊಲೀಸ್ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ಸಂದಾನ ಮಾಡಲು ಯತ್ನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.