ಭಾರಿ ಚರ್ಚೆಗೆ ಗ್ರಾಸವಾಗಿದ್ದ ಟೆಕಿ ಆತ್ಮಹತ್ಯೆ ಕೇಸ್‌ನಲ್ಲಿ ಅತುಲ್ ಪತ್ನಿ, ಅತ್ತೆ, ಬಾಮೈದ ಅರೆಸ್ಟ್‌

KannadaprabhaNewsNetwork | Updated : Dec 16 2024, 04:10 AM IST

ಸಾರಾಂಶ

ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್‌ ಆತ್ಮಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಮೃತನ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್‌ ಆತ್ಮಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಮೃತನ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಜೌನ್‌ಪುರದಲ್ಲಿ ವಾಸವಾಗಿದ್ದ ಟೆಕಿ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಹಾಗೂ ಬಾಮೈದ ಅನುರಾಗ್ ಸಿಂಘಾನಿಯಾ ಅವರನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ಮಾವನ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ. ನ್ಯಾಯಾಲಯಕ್ಕೆ ಆತ್ಮಹತ್ಯೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಶನಿವಾರ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹರಿಯಾಣದ ಗುರ್‌ಗಾವ್‌ನಲ್ಲಿ ನಿಖಿತಾ ಹಾಗೂ ಉತ್ತರಪ್ರದೇಶದ ಅಲಹಬಾದ್‌ನಲ್ಲಿ ಆಕೆಯ ತಾಯಿ ನಿಶಾ ಹಾಗೂ ಸೋದರ ಅನುರಾಗ್‌ನನ್ನು ಶನಿವಾರ ಬಂಧಿಸಲಾಯಿತು. ಬಳಿಕ ನಗರಕ್ಕೆ ಕರೆತಂದು ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.

ಬಂಧನ ಭೀತಿಗೆ ಮನೆಗೆ ಬೀಗ: ಕಳೆದ ಭಾನುವಾರ ಕೌಟುಂಬಿಕ ಕಲಹ ಕಾರಣಕ್ಕೆ ಮಾರತ್ತಹಳ್ಳಿ ಸಮೀಪ ಬಿಹಾರ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಸಾವಿಗೂ ಮುನ್ನ ಮೃತರು ಬರೆದಿಟ್ಟಿದ್ದ 26 ಪುಟಗಳ ಡೆತ್‌ ನೋಟ್ ಹಾಗೂ ವಿಡಿಯೋದಲ್ಲಿ ಪತ್ನಿ ನಿಖಿತಾ ಸಿಂಘಾನಿಯಾ ಕುಟುಂಬದವರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದರು. ಅಲ್ಲದೆ, ಮೃತ ಸೋದರ ನೀಡಿದ ದೂರಿನ ಮೇರೆಗೆ ಅತುಲ್ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ಅತುಲ್ ವಿಡಿಯೋ ಬಹಿರಂಗವಾಗಿ ರಾಷ್ಟ್ರ ಮಟ್ಚದಲ್ಲಿ ವರದಕ್ಷಿಣೆ ದೌರ್ಜನ್ಯ ಕಾಯ್ದೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಲ್ಲಿ ಪ್ರಕರಣ ಬಿರುಗಾಳಿ ಎಬ್ಬಿಸಿದ ಕೂಡಲೇ ಬಂಧನ ಭೀತಿಗೊಳಗಾದ ಮೃತನ ಪತ್ನಿ ನಿಖಿತಾ ಹಾಗೂ ಆಕೆಯ ಪೋಷಕರು, ಉತ್ತರಪ್ರದೇಶದ ಜೌನ್‌ಪುರದಲ್ಲಿದ್ದ ತಮ್ಮ ಮನೆಗೆ ಬೀಗ ಹಾಕಿಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದರು.

ಎರಡು ರಾಜ್ಯಗಳಲ್ಲಿ ಸುತ್ತಾಟ: ಈ ಪ್ರಕರಣದ ತನಿಖೆ ಬೆನ್ನತ್ತಿ ಉತ್ತರಪ್ರದೇಶಕ್ಕೆ ತೆರಳಿದ ಮಾರತ್ತಹಳ್ಳಿ ಪೊಲೀಸರು, ಆರೋಪಿಗಳ ಮನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿದ್ದರು. ಈ ನಡುವೆ ಶನಿವಾರ ಬೆಳಗ್ಗೆ ಅಲಹಬಾದ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ನಿಖಿತಾ, ಆಕೆಯ ತಾಯಿ ನಿಶಾ ಹಾಗೂ ಸೋದರ ಅನುರಾಗ್ ಅರ್ಜಿ ಸಲ್ಲಿಸಿದ್ದರು. ಅಷ್ಟರಲ್ಲಿ ಆರೋಪಿಗಳ ಇರುವಿಕೆ ಮಾಹಿತಿ ಪಡೆದ ಪೊಲೀಸರು, ತಕ್ಷಣವೇ ಕಾರ್ಯಾಚರಣೆ ನಡೆಸಿ ಹರಿಯಾಣ ರಾಜ್ಯದ ಗುರ್‌ಗಾವ್‌ ನಗರದ ಪಿಜಿಯಲ್ಲಿದ್ದ ನಿಖಿತಾ ಹಾಗೂ ಅಲಹಬಾದ್‌ನ ರಾಮೇಶ್ವರ ಇನ್‌ ಹೋಟೆಲ್‌ನಲ್ಲಿ ತಂಗಿದ್ದ ಆಕೆಯ ತಾಯಿ ಹಾಗೂ ಸೋದರನನನ್ನು ಬಂಧಿಸಿದ್ದಾರೆ. ಇನ್ನು ನಾಪತ್ತೆಯಾಗಿರುವ ನಿಖಿತಾಳ ಚಿಕ್ಕಪ್ಪ ಸುಶೀಲ್‌ ಪತ್ತೆಗೆ ಉತ್ತರಪ್ರದೇಶದಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

9 ತಾಸು ತೀವ್ರ ವಿಚಾರಣೆ

ಅತುಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತರಾದ ಮೃತನ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಹಾಗೂ ಬಾಮೈದ ಅನುರಾಗ್‌ ಅವರನ್ನು ದೆಹಲಿಯಿಂದ ಬೆಂಗಳೂರಿಗೆ ಕರೆತರುವ ಮಾರ್ಗ ಮಧ್ಯೆಯೇ ಸುಮಾರು 9 ತಾಸುಗಳ ವಿಚಾರಣೆ ನಡೆಸಿರುವ ಮಾರತ್ತಹಳ್ಳಿ ಠಾಣೆ ಪೊಲೀಸರು ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ನಾನು ತಪ್ಪು ಮಾಡಿಲ್ಲ: ನಿಖಿತಾ

ನನ್ನ ಹಾಗೂ ನನ್ನ ಕುಟುಂಬದ ಮೇಲೆ ಆಧಾರ ರಹಿತವಾದ ಆರೋಪಗಳನ್ನು ಪತಿ ಅತುಲ್ ಮಾಡಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಆತನ ವರ್ತನೆಗಳಿಂದ ಬೇಸತ್ತು ನಾನು ಪ್ರತ್ಯೇಕವಾಗಿದ್ದೆ. ನಮ್ಮ ಮೇಲೆ ಆರೋಪಗಳಿಗೆ ನ್ಯಾಯಾಲಯದಲ್ಲಿ ಉತ್ತರಿಸುತ್ತೇವೆ ಎಂದು ವಿಚಾರಣೆ ವೇಳೆ ನಿಖಿತಾ ಹೇಳಿಕೆ ನೀಡಿರುವುದಾಗಿ ಮೂಲಗಳು ಹೇಳಿವೆ. ಅಲ್ಲದೆ ಇದೇ ರೀತಿ ಹೇಳಿಕೆಯನ್ನು ಮೃತನ ಅತ್ತೆ ನಿಶಾ ಹಾಗೂ ಬಾಮೈದ ಕೂಡ ಕೊಟ್ಟಿದ್ದಾರೆ ಎನ್ನಲಾಗಿದೆ.

ಅತುಲ್‌ ಪುತ್ರನ ಜತೆ ವಿಡಿಯೋ ಕಾಲ್‌

ನನ್ನ ಮಗ ಸಂಬಂಧಿಕರ ಬಳಿ ಸುರಕ್ಷಿತವಾಗಿದ್ದಾನೆ. ಪ್ರಕರಣವು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿರುವ ಕಾರಣ ರಕ್ಷಣೆ ಸಲುವಾಗಿ ಆತನನ್ನು ಬಂಧುಗಳ ಸುಪರ್ದಿಗೆ ಕೊಟ್ಟಿದ್ದೇನೆ ಎಂದು ಪೊಲೀಸರಿಗೆ ನಿಖಿತಾ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ ವಾಟ್ಸಾಪ್ ವಿಡಿಯೋ ಕಾಲ್‌ನಲ್ಲಿ ಮಗನ ಜತೆ ಅತುಲ್ ಸಂಬಂಧಿಕರು ಸಹ ಮಾತನಾಡಿದ್ದಾರೆ ಎಂದು ಪೊಲೀಸರಿಗೆ ನಿಖಿತಾ ಹೇಳಿದ್ದಾರೆ.

Share this article