ಬೆಂಗಳೂರು : ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತನೇ ಆಟೋ ಚಾಲಕನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಗರದ ರಾಘವೇಂದ್ರ ಬ್ಲಾಕ್ ನಿವಾಸಿ ಪೋತರಾಜು (35) ಚಾಕು ಇರಿತಕ್ಕೆ ಒಳಗಾದ ಆಟೋ ಚಾಲಕ. ಭಾನುವಾರ ಮುಂಜಾನೆ ಸುಮಾರು 4.30ಕ್ಕೆ ರಾಘವೇಂದ್ರ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ದೀಕ್ಷಿತ್ ಹಾಗೂ ಆತನ ಸಚಹರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಆಟೋ ಚಾಲಕ ಪೋತರಾಜು ಮತ್ತು ಆರೋಪಿ ದೀಕ್ಷಿತ್ ಸ್ನೇಹಿತರಾಗಿದ್ದು, ಕೆಲ ದಿನಗಳ ಹಿಂದೆ ಮದ್ಯ ಸೇವಿಸುವಾಗ ಇಬ್ಬರ ನಡುವೆ ವಾಗ್ವಾದವಾಗಿತ್ತು. ಈ ವೇಳೆ ಪೋತರಾಜು, ದೀಕ್ಷಿತ್‌ಗೆ ಏಕವಚನದಲ್ಲಿ ಎಲ್ಲರ ಎದುರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಇದರಿಂದ ದೀಕ್ಷಿತ್ ಕೋಪಗೊಂಡು ಪೋತರಾಜು ಜತೆಗೆ ಜಗಳ ಮಾಡಿದ್ದ. ಬಳಿಕ ಜತೆಯಲ್ಲಿದ್ದವರು ಜಗಳ ಬಿಡಿಸಿ ಇಬ್ಬರನ್ನೂ ಕಳುಹಿಸಿದ್ದರು. ಅಂದಿನಿಂದ ದೀಕ್ಷಿತ್, ಪೋತರಾಜು ಮೇಲೆ ದ್ವೇಷ ಸಾಧಿಸುತ್ತಿದ್ದ.
ಆಟೋಗೆ ಹಾನಿ:
ಶನಿವಾರ ರಾತ್ರಿ ಪೋತರಾಜು ಮನೆ ಬಳಿ ಆಟೋ ನಿಲ್ಲಿಸಿದ್ದ. ಈ ನಡುವೆ ದೀಕ್ಷಿತ್ ಮುಂಜಾನೆಯವರೆಗೂ ಕರಗ ನೋಡಿಕೊಂಡು ಸ್ನೇಹಿತರೊಂದಿಗೆ ಮನೆಗೆ ಬರುತ್ತಿದ್ದಾಗ ದೊಣ್ಣೆ ತೆಗೆದುಕೊಂಡು ಪೋತರಾಜುನ ಆಟೋ ಗಾಜುಗಳನ್ನು ಒಡೆದು ಹಾನಿಗೊಳಿಸಿದ್ದಾನೆ. ಈ ಬಗ್ಗೆ ಸ್ಥಳಕ್ಕೆ ಬಂದ ಪೋತರಾಜು ಪ್ರಶ್ನಿಸಿದ್ದು, ಆಗ ಇಬ್ಬರ ನಡುವೆ ಹೊಡೆದಾಟ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ದೀಕ್ಷಿತ್ ಚಾಕು ತೆಗೆದು ಪೋತರಾಜುವಿನ ಕೈಗೆ ಇರಿದಿ ಸಹಚರರ ಜತೆಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಚಾಕು ಇರಿತದಿಂದ ಕೈಗೆ ಗಂಭೀರ ಗಾಯಗೊಂಡಿದ್ದ ಪೋತರಾಜು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಬಳಿಕ ದೀಕ್ಷಿತ್ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.