ಕನ್ನಡಪ್ರಭ ವಾರ್ತೆ ಬೆಂಗಳೂರು
ಗೆಳೆಯನ ಜತೆ ಹೋಗುತ್ತಿದ್ದ ಯುವತಿಗೆ ಆಟೋ ಚಾಲಕನೊಬ್ಬಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ.ನಾನು ತನ್ನ ಪ್ರಿಯಕರನ ಜತೆ ನ.8ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಂದಿರಾನಗರ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದೆ. ಆಗ ಆಟೋ ಚಾಲಕನೊಬ್ಬ ಜೋರಾಗಿ ಕೂಗಿ, ಅಲ್ಲಿಂದ ಹೋಗಿದ್ದಾನೆ. ಆ ಬಳಿಕ ಕೆಲ ಕ್ಷಣ ಬಳಿಕ ಹತ್ತಿರ ಬಂದು ಮತ್ತೆ ಕೂಗಲು ಪ್ರಾರಂಭಿಸಿದ. ನಾನು ಧರಿಸಿರುವ ಬಟ್ಟೆ ಬಗ್ಗೆ ಆಕ್ಷೇಪಿಸಿ, ಇಷ್ಟು ಸಣ್ಣ ಸ್ಕರ್ಟ್ ಏಕೆ ಧರಿಸಿರುವೆ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಗಾಬರಿಯಾಗಿದ್ದು, ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.
ಬಳಿಕ ನನ್ನ ಗೆಳೆಯ, ಆಟೋ ಚಾಲಕನ ಬಳಿ ಹೋಗಿ, ಆಕೆಗೆ ಬೇಕಾದ ಬಟ್ಟೆ ಧರಿಸುತ್ತಾಳೆ. ಇದರಿಂದ ನಿಮಗೇನು ಕಷ್ಟ ಎಂದು ಪ್ರಶ್ನಿಸಿದ್ದಾನೆ. ಆದರೆ ಆಟೋ ಚಾಲಕ, ಅವಳು ಇದೇ ತರಹದ ಬಟ್ಟೆ ಧರಿಸಿದರೆ ಅವಳನ್ನು ಜನ ಅತ್ಯಾಚಾರ ಮಾಡುತ್ತಾರೆ, ನಾನು ಕೂಡ ಆಕೆಯ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ಹೇಳಿದ್ದಾನೆ. ಅದರಿಂದ ಕೋಪಗೊಂಡ ತನ್ನ ಗೆಳೆಯ ಪ್ರಶ್ನಿಸಿದಾಗ, ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಆಟೋ ಚಾಲಕನ ಫೋಟೋ ಅಥವಾ ಆಟೋ ನಂಬರ್ ಅನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಟೋ ಚಾಲಕನಿಗೆ ವಯಸ್ಸಾಗಿತ್ತು, ಬೋಳು ತಲೆ, ಬಿಳಿ ಕೂದಲು ಇತ್ತು. ನೋಡಲು ಒಳ್ಳೆಯವನ ರೀತಿ ಇದ್ದರೂ ಯಾಕೆ ಈ ರೀತಿ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಾರೆ.ನೆಟ್ಟಿಗರ ಆಕ್ರೋಶ:
ನನ್ನ ಗೆಳೆಯ ಇದ್ದಿದ್ದರಿಂದ ನನಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಅದೇ ನಾನೊಬ್ಬಳೇ ಇದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಲು ಕಷ್ಟ ಎಂದು ಪೋಸ್ಟ್‌ನಲ್ಲಿ ಯುವತಿ ಬರೆದುಕೊಂಡಿದ್ದಾಳೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಟೋ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಇಂದಿರಾನಗರ ಪೊಲೀಸರು ತಿಳಿಸಿದ್ದಾರೆ.