ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ

Published : Dec 27, 2025, 04:46 AM IST
Bairati Basavaraju

ಸಾರಾಂಶ

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೆ.ಆರ್‌.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ. ಇದರಿಂದ ಸಿಐಡಿ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಬೈರತಿ ಬಸವರಾಜು ಕೊಂಚ ನಿರಾಳರಾಗಿದ್ದಾರೆ.

  ಬೆಂಗಳೂರು :  ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೆ.ಆರ್‌.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ. ಇದರಿಂದ ಸಿಐಡಿ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಬೈರತಿ ಬಸವರಾಜು ಕೊಂಚ ನಿರಾಳರಾಗಿದ್ದಾರೆ.

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಬಸವರಾಜ ಅವರ ರಜಾಕಾಲದ ಏಕ ಸದಸ್ಯಪೀಠ, ಮುಖ್ಯ ಅರ್ಜಿ ಇತ್ಯರ್ಥವಾಗುವವರೆಗೆ ಬೈರತಿ ಬಸವರಾಜು ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.

ದೋಷಾರೋಪ ಪಟ್ಟಿ ಸರಿಯಿಲ್ಲ:

ಪ್ರಕರಣ ಸಂಬಂಧ ಇತರೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು, ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಅರ್ಜಿದಾರರನ್ನು ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಹೇಳಿರುವುದಕ್ಕೆ ಸಮಂಜಸ ಕಾರಣ ನೀಡಿಲ್ಲ. ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರಲಿಲ್ಲ. ಆದರೆ, ಸಿಐಡಿ ತನಿಖಾಧಿಕಾರಿ ಅರ್ಜಿದಾರರನ್ನು ವಿಚಾರಣೆಗೆ ಕರೆದಿಲ್ಲ. ವಿಚಾರಣೆಗೆ ಕರೆದು ನೀಡಿರುವ ನೋಟಿಸ್‌ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಹಾಗಾಗಿ, ಈ ಹಂತದಲ್ಲಿ ಮುಖ್ಯಅರ್ಜಿ ಇತ್ಯರ್ಥವಾಗುವವರೆಗೆ ಅರ್ಜಿದಾರರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವುದು ಸೂಕ್ತ ಎಂದು ನಿರ್ಧರಿಸಿತು.

ವಿಚಾರಣೆ ಜ.6ಕ್ಕೆ

ನಂತರ ಅರ್ಜಿದಾರರನ್ನು ಬಂಧಿಸಿದರೆ ಐದು ಲಕ್ಷ ರು. ವೈಯಕ್ತಿಕ ಬಾಂಡ್‌ ನೀಡಬೇಕು ಹಾಗೂ ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು ಎಂದು ತನಿಖಾಧಿಕಾರಿಗೆ ಸೂಚಿಸಿದ ಪೀಠ, ಅರ್ಜಿದಾರರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷ್ಯಧಾರಗಳನ್ನು ತಿರುಚುವ ಪ್ರಯತ್ನ ಮಾಡಬಾರದು ಎಂದು ಷರತ್ತು ವಿಧಿಸಿತು. ಹಾಗೆಯೇ, ಅರ್ಜಿ ಕುರಿತು ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಸಿಐಡಿ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ವಿಚಾರಣೆಯನ್ನು ಜ.6ಕ್ಕೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿ, ಬಿಕ್ಲು ಶಿವ ಅವರ ಕೊಲೆ 2025ರ ಜು.15ರಂದು ನಡೆದಿತ್ತು. ಎಫ್‌ಐಆರ್‌ನಲ್ಲಿ ಅರ್ಜಿದಾರರ ಹೆಸರು ಇರಲಿಲ್ಲ. ಆದರೂ ಅವರನ್ನು ಐದನೇ ಐದನೇ ಆರೋಪಿಯಾಗಿ ಮಾಡಲಾಗಿತ್ತು. ಎಫ್‌ಐಆರ್‌ ರದ್ದು ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಜು.18ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು. ಅವರು ತನಿಖೆಗೆ ಸಹಕರಿಸಬೇಕು ಎಂದು ಮಧ್ಯಂತರ ಆದೇಶ ಮಾಡಿತ್ತು. ಇದರಿಂದ ಐದು ತಿಂಗಳು 10 ದಿನ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆಯಿತ್ತು. ಅದನ್ನು ಮುಂದುವರಿಸಬೇಕು ಎಂದು ಪೀಠವನ್ನು ಕೋರಿದರು.

ಹೈಕೋರ್ಟ್‌ ಸೂಚನೆಯಂತೆ ಎರಡು ಬಾರಿ ತನಿಖಾಧಿಕಾರಿ ಮುಂದೆ ಹಾಜರಾಗಿದ್ದ ಅರ್ಜಿದಾರರು, ತಮ್ಮ ಹೇಳಿಕೆ ದಾಖಲಿಸಿದ್ದರು. ನಂತರ ಐದು ತಿಂಗಳು ಕಳೆದರೂ ಸಿಐಡಿ ತನಿಖಾಧಿಕಾರಿಗಳು ಅರ್ಜಿದಾರರಿಗೆ ವಿಚಾರಣೆಗೆ ಕರೆದಿಲ್ಲ. ಡಿ.22ರಂದು ಸಿಐಡಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣದ 18 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರರು ಮತ್ತು 20ನೇ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಅವರಿಬ್ಬರ ವಿರುದ್ಧ ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ತನಿಖಾಧಿಕಾರಿದ್ದಾರೆ. ಇದು ಸಮಂಜಸವಾಗಿಲ್ಲ. ಮೇಲಾಗಿ ಅರ್ಜಿದಾರರು ಯಾವುದೇ ಅಪರಾಧ ಎಸಗಿರುವ ಬಗ್ಗೆ ಸಾಕ್ಷ್ಯಧಾರಗಳು ಇಲ್ಲದಿದ್ದರೂ ಕೇವಲ ರಾಜಕೀಯ ದ್ವೇಷದಿಂದ ಅವರನ್ನು ಬಂಧಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ನಿರೀಕ್ಷಣಾ ಜಾಮೀನು ಜಾಮೀನು ನೀಡಬೇಕು ಎಂದು ಕೋರಿದರು.

ಸರ್ಕಾರದ ಪರ ವಕೀಲರು ಮೊಮೊ ಸಲ್ಲಿಸಿ, ಪ್ರಕರಣ ಸಂಬಂಧ ಸಿಐಡಿ ಪೊಲೀಸರ ಪರ ವಾದ ಮಂಡಿಸಲು ಬಿ.ಎನ್‌. ಜಗದೀಶ್‌ ರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಿಸಲಾಗಿದೆ. ಅವರಿಗೆ ಈ ಪ್ರಕರಣ ಇಂದು ವಿಚಾರಣೆಗೆ ಬರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ಅವರು ವಿದೇಶದಲ್ಲಿದ್ದು, ಡಿ.30ರಂದು ದೇಶಕ್ಕೆ ವಾಪಸಾಗಲಿದ್ದಾರೆ. ವಾದ ಮಂಡಿಸಲು ಅವರಿಗೆ ಅವಕಾಶ ನೀಡಬೇಕು. ತನಿಖಾಧಿಕಾರಿ ಹೆಚ್ಚಿನ ತನಿಖೆ ನಡೆಸಬೇಕಿದೆ. ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ. ಅದಕ್ಕಾಗಿ ವಿಚಾರಣೆ ಮುಂದೂಡಬೇಕು. ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಆಕ್ಷೇಪಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಆಸ್ಪತ್ರೆಯ ಬಟ್ಟೆ ಬದಲಿಸುವ ಮಹಿಳೆ ದೃಶ್ಯ ಸೆರೆ ಹಿಡಿದ ಸಿಬ್ಬಂದಿ ಬಂಧನ
ಹನಿಮೂನ್‌ ಅರ್ಧಕ್ಕೆ ಬಿಟ್ಟು ಬಂದು ಆತ್ಮಹತ್ಯೆ ಯತ್ನಿಸಿದಳು: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ