ಬೈರತಿ ಬಸವರಾಜುಗೆ ಸತತ 3 ಗಂಟೆ ವಿಚಾರಣೆ ಬಿಸಿ

KannadaprabhaNewsNetwork |  
Published : Jul 20, 2025, 01:25 AM ISTUpdated : Jul 20, 2025, 08:42 AM IST
MLA Byrathi Basavaraj and Jagadish

ಸಾರಾಂಶ

ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಶನಿವಾರ ಪೊಲೀಸ್‌ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. 

 ಬೆಂಗಳೂರು  :  ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಶನಿವಾರ ಪೊಲೀಸ್‌ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್ ಅವರ ಮುಂದೆ ಹಾಜರಾಗಿ ಸುಮಾರು ಮೂರು ತಾಸು ವಿಚಾರಣೆಗೊಳಗಾದರು. 

ಹಾಗೆ ನೋಡಿದರೆ ಬೆಳಗ್ಗೆ 11.30ಕ್ಕೆ ತನಿಖಾಧಿಕಾರಿ ಮುಂದೆ ಹಾಜರಾಗಲು ಬೈರತಿ ಅವರಿಗೆ ಸೂಚಿಸಲಾಗಿತ್ತು. ಆದರೆ, ಗಂಟೆ ಮಧ್ಯಾಹ್ನ 2 ಗಂಟೆ ಕಳೆದರೂ ಅವರು ಪೊಲೀಸ್‌ ಠಾಣೆಯತ್ತ ಸುಳಿಯದಿರುವುದರಿಂದ, ಪೊಲೀಸರೇ ಅವರನ್ನು ಹುಡುಕಿಕೊಂಡು ಹೋಗಬಹುದು ಎಂದು ಹೇಳಲಾಗಿತ್ತು.

 ಇದಾದ ಬಳಿಕ ಠಾಣೆಗೆ ಹಾಜರಾಗಿದ್ದ ಬೈರತಿ ಬಸವರಾಜು ಪರ ವಕೀಲರು, ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ್ದರು. ಆದರೆ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಮರಳಿದ ವಕೀಲರು ಕೆಲ ಹೊತ್ತಿನ ಬಳಿಕ ಬೈರತಿ ಬಸವರಾಜ್‌ ಜೊತೆಗೆ ಠಾಣೆಗೆ ಹಾಜರಾದರು. 

ಹೀಗೆ ಭಾರೀ ನಾಟಕೀಯ ಬೆಳವಣಿಗೆ ಬಳಿಕ ನಿಗದಿತ ಸಮಯಕ್ಕಿಂತ 3 ತಾಸು ವಿಳಂಬವಾಗಿ ಎಸಿಪಿ ಪ್ರಕಾಶ್ ರಾಥೋಡ್ ಅವರ ಮುಂದೆ ಹಾಜರಾಗಿದ್ದ ಶಾಸಕರನ್ನು ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಯಿತು. ಬಳಿಕ ಜು.23 ರಂದು ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಂಜೆ 6 ಗಂಟೆಗೆ ವಾಪಸ್‌ ಕಳುಹಿಸಿದ್ದಾರೆ. ಸುಧೀರ್ಘ ವಿಚಾರಣೆ ಎದುರಿಸಿ ಹೊರಬಂದ ಬೈರತಿ ಬಸವರಾಜು ಅವರು, ತಾನು ತನಿಖೆಗೆ ಸಹಕರಿಸಿದ್ದಾಗಿ ಮಾಧ್ಯಮಗಳಿಗೆ ಚುಟುಕಾಗಿ ಪ್ರತಿಕ್ರಿಯಿಸಿ ತೆರಳಿದರು.

ಏನೇನು ವಿಚಾರಣೆ?:ಮೃತ ರೌಡಿ ಶಿವಪ್ರಕಾಶ್ ಪರಿಚಯ, ಕಿತ್ತಗನೂರು ಭೂ ವಿವಾದ ಹಾಗೂ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನ ಜತೆ ನಂಟು ಸೇರಿ ಹಲವು ವಿಚಾರಗಳ ಬಗ್ಗೆ ಶಾಸಕರನ್ನು ತನಿಖಾಧಿಕಾರಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾನು ಯಾವುದೇ ತಪ್ಪು ಮಾಡಿಲ್ಲ. ತನಗೂ ಶಿವಪ್ರಕಾಶ್ ಹತ್ಯೆಗೂ ಸಂಬಂಧವಿಲ್ಲ. ನನಗೆ ಜಗದೀಶನ ಪರಿಚಯವಿದೆ. ಆದರೆ ಆತನ ಕಾನೂನುಬಾಹಿರ ಚಟುವಟಿಕೆಗಳಿಗೆ ಸಹಕರಿಸಿಲ್ಲ ಎಂದು ಶಾಸಕರು ಅಲವತ್ತುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.ಕಳೆದ ಮಂಗಳವಾರ ರಾತ್ರಿ ಹಲಸೂರು ಕೆರೆ ಸಮೀಪದ ತನ್ನ ಮನೆ ಮುಂದೆ ನಿಂತಿದ್ದಾಗ ರೌಡಿ ಶಿವಪ್ರಕಾಶ್ ಹತ್ಯೆಯಾಗಿತ್ತು. ಕಿತ್ತಗನೂರು ಗ್ರಾಮದ ಭೂ ವಿವಾದ ಹಿನ್ನೆಲೆಯಲ್ಲಿ ಆತನನ್ನು ಶಾಸಕ ಬೈರತಿ ಬಸವರಾಜು ಅವರ ಬಲಗೈ ಭಂಟ ಜಗದೀಶ ಅಲಿಯಾಸ್ ಜಗ್ಗ ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಈ ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಶಾಸಕರ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿತ್ತು.

ಕೊಲೆ ಕೇಸಲ್ಲಿ ನನ್ನ ಪಾತ್ರ ಏನೂ ಇಲ್ಲ

ಕೊಲೆ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ವಿಚಾರಣೆ ವೇಳೆ ಎಸಿಪಿ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನಗೆ ಯಾವ ಜಗದೀಶನೂ ಪರಿಚಯವಿಲ್ಲ. ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಅದಂತೆ ನಾನು ವಿಚಾರಣೆಗೆ ಹಾಜರಾಗುತ್ತೇನೆ.- ಬೈರತಿ ಬಸವರಾಜು, ಬಿಜೆಪಿ ಶಾಸಕ

PREV
Read more Articles on

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ