ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಹಿರಿಯ ಭೂ ವಿಜ್ಞಾನಿ ಕೆ.ಎಸ್.ಪ್ರತಿಮಾ(43) ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸುಬ್ರಮಣ್ಯಪುರ ಠಾಣೆ ಪೊಲೀಸರು, ಆರೋಪಿ ಕಿರಣ್ ವಿರುದ್ಧ ನ್ಯಾಯಾಲಯಕ್ಕೆ ಸುಮಾರು 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ತಲಘಟ್ಟಪುರ ಠಾಣೆ ಇನ್ಸ್‌ಪೆಕ್ಟರ್ ಜಗದೀಶ್ ಅವರು ಆರೋಪಿ ಕಿರಣ್ ನೀಡಿದ್ದ ಸ್ವ ಇಚ್ಛಾ ಹೇಳಿಕೆ, 70 ಮಂದಿ ಸಾಕ್ಷಿದಾರರ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ, ಡಿಜಿಟೆಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯ ಒಳಗೊಂಡಂತೆ ಸುಮಾರು 600 ಪುಟಗಳ ದೋಷಾರೋಪ ಪಟ್ಟಿಯನ್ನು 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣ ಹಿನ್ನೆಲೆ: ಆರೋಪಿ ಕಿರಣ್ ಭೂವಿಜ್ಞಾನ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನ ಕೆಲಸಕ್ಕೆ ಸೇರಿದ್ದ. ಹಿರಿಯ ಭೂ ವಿಜ್ಞಾನಿ ಪ್ರತಿಮಾ ಅವರಿಗೆ ಕಾರು ಚಾಲಕನಾಗಿದ್ದ.
ಈತನ ವರ್ತನೆ ಸರಿ ಇಲ್ಲದ ಕಾರಣ ಪ್ರತಿಮಾ ಅವರು ಕೆಲಸದಿಂದ ತೆಗೆದಿದ್ದರು. ಹೀಗಾಗಿ ಕಿರಣ್, 2023ರ ನವೆಂಬರ್ 4ರ ರಾತ್ರಿ 8.30ಕ್ಕೆ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿರುವ ಪ್ರತಿಮಾ ಅವರ ಮನೆಗೆ ತೆರಳಿ ಮತ್ತೊಮ್ಮೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದ. ಪ್ರತಿಮಾ ಕೆಲಸ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು.
ಇದರಿಂದ ಕೋಪಗೊಂಡಿದ್ದ ಆರೋಪಿ ಕಿರಣ್, ಏಕಾಏಕಿ ವೇಲ್‌ನಿಂದ ಪ್ರತಿಮಾ ಅವರ ಕುತ್ತಿಗೆ ಬಿಗಿದು ಕೊಲೆಗೈದಿದ್ದ. ಬಳಿಕ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದು ಕುತ್ತಿಗೆ ಕೊಯ್ದು ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಕಬೋರ್ಡ್‌ನಲ್ಲಿದ್ದ 5 ಲಕ್ಷ ರು. ನಗದು ದೋಚಿ ಪರಾರಿಯಾಗಿದ್ದ.
ಈ ಸಂಬಂಧ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಕಿರಣ್ ಘಟನೆ ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಪಾಸ್ ಬೆಂಗಳೂರಿಗೆ ಬರುವಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.