ನಕಲಿ ಆರ್‌ಟಿಐನಿಂದ ಬ್ಲ್ಯಾಕ್‌ಮೇಲ್‌: ಸೆರೆ

KannadaprabhaNewsNetwork |  
Published : Feb 02, 2024, 01:00 AM ISTUpdated : Feb 02, 2024, 02:24 PM IST
crime news

ಸಾರಾಂಶ

ನಕ್ಷೆ ಮೀರಿ ಕಟ್ಟಡ ಕಟ್ಟುತ್ತಿದ್ದೀರೆಂದು ರಿಯಲ್‌ ಎಸ್ಟೇಟ್‌ ಉದ್ಯಮಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ಬಹಿರಂಗಪಡಿಸುವುದಾಗಿ ರಿಯಲ್‌ ಎಸ್ಟೇಟ್ ಉದ್ಯಮಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ನಕಲಿ ಮಾಹಿತಿ ಹಕ್ಕು ಕಾರ್ಯಕರ್ತ ಸೇರಿ ಇಬ್ಬರನ್ನು ಸಿಸಿಬಿ ಬಂಧಿಸಿದೆ.

ಮಂಜುನಾಥ್‌ ನಗರದ ನಿವಾಸಿ ದೀಪಕ್‌ಗೌಡ ಹಾಗೂ ತಾವರೆಕೆರೆ ರೌಡಿ ರಕ್ಷಿತ್‌ ಬಂಧಿತನಾಗಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬ ರೌಡಿ ಅಜಯ್ ಕುಮಾರ್‌ ಅಲಿಯಾಸ್ ಅಂಟ್ರಾ ಪತ್ತೆಗೆ ತನಿಖೆ ನಡೆದಿದೆ. 

ಕೆಲ ದಿನಗಳ ಹಿಂದೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಬಿಂದು ಡೆವೆಲಪರ್ಸ್‌ ಕಂಪನಿ ಮಾಲಿಕರಿಗೆ ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ಬೆದರಿಕೆ ಹಾಕಿ ₹80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. 

ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಆ ರಿಯಲ್‌ ಎಸ್ಟೇಟ್ ಕಂಪನಿಯ ಉದ್ಯಮಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ನಕಲಿ ಆರ್‌ಟಿಐ ಕಾರ್ಯಕರ್ತ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

‘ಜೈ ಹಿಂದ್’ ಕಾಟ: ತನ್ನ ಪತ್ನಿ ಹಾಗೂ ಮಗು ಜತೆ ನೆಲೆಸಿದ್ದ ದೀಪಕ್‌ಗೌಡ, ‘ಜೈ ಹಿಂದ್’ ಎಂಬ ಹೆಸರಿನ ಸಂಘಟನೆಯನ್ನು ಕಟ್ಟಿ ಹಲವು ರೌಡಿಗಳನ್ನು ಆತ ಸೇರಿಸಿಕೊಂಡಿದ್ದ. 

ಹಲವು ವರ್ಷಗಳಿಂದ ರೌಡಿಗಳಾದ ಅಜಯ್‌, ರಕ್ಷಿತ್‌ ಜತೆ ದೀಪಕ್‌ಗೆ ಸ್ನೇಹವಿತ್ತು. ಈ ಗೆಳತನದಲ್ಲೇ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಸಿ ಹಣ ವಸೂಲಿಗೆ ಈ ಮೂವರು ಇಳಿದಿದ್ದರು.

ಅಂತೆಯೇ ರಾಜಾಜಿನಗರ, ವಿಜಯನಗರ ಹಾಗೂ ಮಾಗಡಿ ಸೇರಿದಂತೆ ನಗರದ ವಿವಿಧೆಡೆ ದೊಡ್ಡ ದೊಡ್ಡ ಬಿಲ್ಡರ್‌ಗಳ ಬಗ್ಗೆ ಆರೋಪಿಗಳು ಮಾಹಿತಿ ಕಲೆ ಹಾಕಿದ್ದರು. ಆ ಬಿಲ್ಡರ್‌ಗಳಿಗೆ ತಮಗೆ ಬಿಬಿಎಂಪಿ ಮಂಜೂರಾದ ಯೋಜನೆಯಂತೆ ನೀವು ಕಟ್ಟಡಗಳನ್ನು ನಿರ್ಮಾಣ ಮಾಡದೆ ನಿಯಮ ಉಲ್ಲಂಘಿಸಿದ್ದೀರಿ.

ಈ ವಿಚಾರವನ್ನು ಬಹಿರಂಗಪಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡುತ್ತೇವೆ ಎಂದು ದೀಪಕ್ ಗ್ಯಾಂಗ್‌ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿತ್ತು.

ಅದೇ ರೀತಿ ವೆಸ್ಟ್ ಆಫ್‌ ಕಾರ್ಡ್ ರಸ್ತೆಯ ಬಿಂದು ವೆಂಚರ್ಸ್‌ ಸಂಸ್ಥೆಯವರಿಗೆ ಬೆದರಿಸಿ ಆರೋಪಿಗಳು ಒತ್ತಾಯಿಸಿದ್ದರು. ಈ ಸುಲಿಗೆಕೋರರ ಕಾಟ ಸಹಿಸಲಾರದೆ ಕೊನೆಗೆ ಮಾಗಡಿ ರಸ್ತೆ ಠಾಣೆಗೆ ಬಿಂದು ವೆಂಚರ್ಸ್ ಮಾಲಿಕ ದೂರು ಕೊಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಂಧಿತರ ಪೈಕಿ ರಕ್ಷಿತ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ತಾವರೆಕೆರೆಯ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ಕೊಲೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ. ಈ ಕ್ರಿಮಿನಲ್ ಚರಿತ್ರೆ ಹಿನ್ನಲೆಯಲ್ಲಿ ಆತನ ಮೇಲೆ ತಾವರೆಕೆರೆ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳಿಗೆ ಜಾಮೀನು
ಪುತ್ರನ ಸಮಯ ಪ್ರಜ್ಞೆಯಿಂದ 6 ತಾಸು ಡಿಜಿಟಲ್‌ ಅರೆಸ್ಟ್‌ ಆಗಿದ್ದ ತಂದೆ ಅಕ್ರಮದಿಂದ ಪಾರು