ಬೆಂಗಳೂರು : ಇಳಿ ಜಾರಿನಲ್ಲಿ ಹ್ಯಾಂಡ್ ಬ್ರೇಕ್ ಹಾಕದ ಚಾಲಕನ ನಿರ್ಲಕ್ಷ್ಯತನದಿಂದ ಸಿಮೆಂಟ್ ಇಟ್ಟಿಗೆ (ಹಾಲೋಬ್ರಿಕ್ಸ್) ತುಂಬಿದ್ದ ಕ್ಯಾಂಟರ್ ಅಡ್ಡಾದಿಡ್ಡಿಯಾಗಿ ಚಲಿಸಿದ ಪರಿಣಾಮ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸೋದರರು ಬಲಿಯಾದ ದಾರುಣ ಘಟನೆ ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯ ನಿವಾಸಿಗಳಾದ ಮಹಮ್ಮದ್ ಶಾಹಿದ್ ರಝಾ (21) ಹಾಗೂ ಆತನ ಸೋದರ ರೆಹಾನ್ ಅಹಮದ್ ರಝಾ (14) ಮೃತ ದುರ್ದೈವಿಗಳು. ಘಟನೆ ಸಂಬಂಧ ಕ್ಯಾಂಟರ್ ಚಾಲಕ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಏಳು ಬೈಕ್‌ಗಳು ಹಾಗೂ ಎರಡು ಕಾರುಗಳು ಜಖಂಗೊಂಡಿವೆ. ಹೊಸಗುಡ್ಡದಹಳ್ಳಿಯ ನಿರ್ಮಾಣ ಹಂತದ ಮನೆ ಕಟ್ಟಡಕ್ಕೆ ಬೆಳಗ್ಗೆ 8.30ರಲ್ಲಿ ಹಾಲೋಬ್ರಿಕ್ಸ್ ಅನ್ ಲೋಡ್ ಮಾಡಲು ಕ್ಯಾಂಟರ್ ಬಂದಾಗ ಈ ಸರಣಿ ಅಪಘಾತ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲವು ವರ್ಷಗಳ ಹಿಂದೆ ನಗರಕ್ಕೆ ಕೆಲಸ ಅರಸಿ ಬಂದ ಉತ್ತರಪ್ರದೇಶ ಮೂಲದ ಮೃತ ಶಾಹಿದ್ ಸೋದರರ ಪೋಷಕರು ಹೊಸಗುಡ್ಡದಹಳ್ಳಿಯ ಎಫ್ ಸ್ಟ್ರೀಟ್‌ನಲ್ಲಿ ನೆಲೆಸಿದ್ದಾರೆ. ಕೈ ಮಗ್ಗದಲ್ಲಿ ಮೃತ ಶಾಹಿದ್ ದುಡಿಯುತ್ತಿದ್ದರೆ, 7ನೇ ತರಗತಿಯಲ್ಲಿ ರೆಹಾನ್ ಓದುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹೇಗಾಯ್ತು ಘಟನೆ:
ಮನೆ ಬಳಿ ಬೈಕ್‌ನಲ್ಲಿ ತನ್ನ ಸೋದರನ ಜತೆ ಶಾಹಿದ್ ತೆರಳುತ್ತಿದ್ದ. ಅದೇ ವೇಳೆ ಸಿಮೆಂಟ್ ಇಟ್ಟಿಗೆ ತುಂಬಿಕೊಂಡು ಬಂದಿದ್ದ ಕ್ಯಾಂಟರ್ ಚಾಲಕ ಸುರೇಶ್, ಕಟ್ಟಡದ ಬಳಿ ಅನ್ ಲೋಡ್ ಮಾಡಲು ಹ್ಯಾಂಡ್ ಬ್ರೇಕ್ ಹಾಕದೆ ಕ್ಯಾಂಟರ್ ನಿಲ್ಲಿಸಿ ವಾಹನದಿಂದ ಕೆಳಗಿಳಿದಿದ್ದಾನೆ. ಆಗ ಇಳಿ ಜಾರಿನ ರಸ್ತೆಯಾಗಿದ್ದರಿಂದ ಕ್ಯಾಂಟರ್ ಮುಂದೆ ಸಾಗಿದೆ. ಈ ಹಂತದಲ್ಲಿ ಕ್ಯಾಂಟರ್ ಅನ್ನು ನಿಲ್ಲಿಸಲು ಯತ್ನಿಸಿ ವಿಫಲನಾಗಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ್ದ ಕ್ಯಾಂಟರ್ ಮುನ್ನುಗ್ಗಿ ಎದುರಿಗೆ ಬಂದ ಶಾಹಿದ್ ಬೈಕ್‌ಗೆ ಗುದ್ದಿದೆ. ಹಾಗೆ ಮುಂದುವರೆದು ರಸ್ತೆ ಬದಿ ನಿಲ್ಲಿಸಿದ್ದ 7 ಬೈಕ್‌ಗಳು ಹಾಗೂ 2 ಕಾರುಗಳಿಗೆ ಅಪ್ಪಳಿಸಿದೆ. ಆ ವಾಹನಗಳು ಚಕ್ರಕ್ಕೆ ಸಿಲುಕಿದ ಕಾರಣ ಮುಂದೆ ಚಲಿಸಲಾಗದೆ ಕೊನೆಗೆ ಕ್ಯಾಂಟರ್ ನಿಂತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಸರಣಿ ಅಪಘಾತದ ತೀವ್ರತೆ ಯಾವ ಮಟ್ಟಿಗೆ ಭೀಕರವಾಗಿತ್ತು ಅಂದರೆ ಕ್ಯಾಂಟರ್‌ನ ಚಕ್ರಗಳಡಿ ಅಡಿ ಸಿಲುಕಿದ ಶಾಹಿದ್ ಸೋದರರನ್ನು 200 ಮೀಟರ್ ನಷ್ಟು ಎಳೆದೊಯ್ದಿದೆ. ಕೂಡಲೇ ಗಾಯಾಳುಗಳ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಸೋದರರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಪೊಲೀಸರಿಗೆ ಚಾಲಕ ಶರಣು
ಅಪಘಾತ ಸಂಭವಿಸಿದ ಕೂಡಲೇ ಜೀವಭೀತಿಯಿಂದ ತಪ್ಪಿಸಿಕೊಂಡ ಚಾಲಕ ಸುರೇಶ್, ಕೊನೆಗೆ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರ ಮುಂದೆ ಸ್ವಯಂ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.