ಪೋಕ್ಸೋ ಕೇಸ್‌ ರದ್ದು ಕೋರಿ ಬಿಎಸ್‌ವೈ ಹೈಕೋರ್ಟ್‌ಗೆ - ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ

ಸಾರಾಂಶ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬೆಂಗಳೂರು :  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಕುರಿತಂತೆ ಯಡಿಯೂರಪ್ಪ ಅವರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಸಿಐಡಿ ಪೊಲೀಸರನ್ನು ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

17 ವರ್ಷದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಯಡಿಯೂರಪ್ಪ ಅವರ ಮೇಲಿದೆ. ಈ ಘಟನೆ ಕುರಿತು ಸಂತ್ರಸ್ತೆಯ ತಾಯಿ ಮಾ.14ರಂದು ಸದಾಶಿವನಗರ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು. ಸಿಐಡಿ ಪೊಲೀಸರು ವಿಚಾರಣೆಗೆ ಹಾಜರಾಗಲು ಸೂಚಿಸಿ ಮಾ.28ರಂದು ಯಡಿಯೂರಪ್ಪಗೆ ನೋಟಿಸ್‌ ನೀಡಿದ್ದರು.

ಅದರಂತೆ ವಿಚಾರಣೆಗೆ ಹಾಜರಾಗಿದ್ದ ಯಡಿಯೂರಪ್ಪ ಅವರು, ಇದೀಗ ಪ್ರಕರಣಕ್ಕೆ ಸಂಬಂಧಿಸಿದ ದೂರು, ಎಫ್‌ಐಆರ್‌ ಮತ್ತು ಪೋಕ್ಸೋ ವಿಶೇಷ ಕೋರ್ಟ್‌ ಮುಂದಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಾವು ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ದೂರುದಾರ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿದೆ. ಹಾಗಾಗಿ ಅನಗತ್ಯ ದೂರು ನೀಡಿದ್ದರು. ಎಫ್‌ಐಆರ್‌ ದಾಖಲಾದ ನಂತರ ಏ.13ರಂದು ಸಿಐಡಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೆ ಧ್ವನಿ ಮಾದರಿ ಸಂಗ್ರಹಿಸಿದರು. ದೂರಿನಲ್ಲಿ ಅಪರಾಧದ ಅಂಶಗಳು ಇಲ್ಲ. ಆದ ಕಾರಣ ದೂರು ರದ್ದುಪಡಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಪ್ರಕರಣದ ವಿಚಾರಣೆಯಲ್ಲಿ ಸಿಐಡಿ ಪೊಲೀಸರ ಪರ (ಪ್ರಾಸಿಕ್ಯೂಷನ್‌) ವಾದಿಸಲು ಹಿರಿಯ ವಕೀಲ ಅಶೋಕ್ ಎನ್. ನಾಯಕ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಸರ್ಕಾರ ನೇಮಕ ಮಾಡಿದೆ.

ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ವಿಚಾರಣಾಧೀನ (ಪೋಕ್ಸೋ ಕೋರ್ಟ್‌) ನ್ಯಾಯಾಲಯದಲ್ಲಿ ನಡೆಸಲು ಅಶೋಕ್ ನಾಯಕ್ ಅವರನ್ನು ನೇಮಿಸಲಾಗಿದೆ ಎಂದು ಬುಧವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ರಾಜ್ಯ ಒಳಾಡಳಿತ ಇಲಾಖೆ (ಪೊಲಿಸ್‌ ಸೇವೆಗಳು-ಬಿ) ಅಧೀನ ಕಾರ್ಯದರ್ಶಿ ಜಿ.ಶ್ಯಾಮ್‌ ಹೊಳ್ಳ ತಿಳಿಸಿದ್ದಾರೆ.

Share this article