ಜಿಗಣಿಯಲ್ಲಿ ಅಕ್ರಮವಾಗಿ ನೆಲೆಸಿದ್ದ12 ಪಾಕಿಸ್ತಾನದ ಪ್ರಜೆಗಳ ವಿರುದ್ಧ ಚಾರ್ಜ್‌ಶೀಟ್‌

KannadaprabhaNewsNetwork |  
Published : Dec 02, 2024, 01:21 AM ISTUpdated : Dec 02, 2024, 04:33 AM IST
ಬಂಧಿತ ಪಾಕ್ ಪ್ರಜೆ ರಶೀದ್‌, ಆತನ ಪತ್ನಿ | Kannada Prabha

ಸಾರಾಂಶ

ಜಿಗಣಿ ಪೋಲಿಸರು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆ, ಆತನ ಬಾಂಗ್ಲಾದೇಶದ ಪತ್ನಿ ಸೇರಿದಂತೆ 22 ಮಂದಿ ಬಂಧನ ಸಂಬಂಧ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ 1,350ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ 

 ಬೆಂಗಳೂರು ದಕ್ಷಿಣ : ಜಿಗಣಿ ಪೋಲಿಸರು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆ, ಆತನ ಬಾಂಗ್ಲಾದೇಶದ ಪತ್ನಿ ಸೇರಿದಂತೆ 22 ಮಂದಿ ಬಂಧನ ಸಂಬಂಧ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ 1,350ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.ಪಾಕಿಸ್ತಾನದ ಪ್ರಜೆ ರಶೀದ್ ಅಲಿ ಸಿದ್ದಿಕ್ಕಿ ಪ್ರಕರಣ ಎ1 ಆರೋಪಿಯಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ.

22 ಮಂದಿ ಬಂಧಿತ ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಅದರಲ್ಲಿ ಒಂದು ಪ್ರಕರಣದಲ್ಲಿ 8 ಪುರುಷರು, 3 ಮಹಿಳೆಯರು ಹಾಗೂ ಒಂದು ಬಾಲಕಿ ಸೇರಿದಂತೆ ಒಟ್ಟು 12 ಮಂದಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಮೂರ್ನಾಲ್ಕು ವರ್ಷಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ಪಾಕ್ ಪ್ರಜೆಗಳು ಮುಸ್ಲಿಂ ಹೆಸರಿನ ಬದಲು ಹಿಂದೂಗಳ ಹೆಸರುಗಳನ್ನು ಇಟ್ಟುಕೊಂಡು ಅಕ್ರಮವಾಗಿ ಜಿಗಣಿಯಲ್ಲಿ ನೆಲೆಸಿದ್ದರು. ಪಾಕ್ ಪ್ರಜೆಗಳ ಮಾಹಿತಿ ಬಹಿರಂಗಗೊಂಡು ತನಿಖೆ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿದ್ದವು. ಹಣ ವರ್ಗಾವಣೆ, ಅಕ್ರಮವಾಗಿ ಭಾರತಕ್ಕೆ ವಲಸೆ, ಉದ್ಯೋಗ, ಧರ್ಮ ಬೋಧನೆ ವಿಚಾರಗಳನ್ನು ಪೋಲಿಸರು ಬಯಲಿಗೆಳೆದಿದ್ದರು.

ಅಕ್ರಮವಾಗಿ ಬಂದಿದ್ದ ಪಾಕ್ ಪ್ರಜೆಗಳು ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ ಬೇರೆಬೇರೆ ರಾಜ್ಯಗಳಲ್ಲಿ ವಾಸ ಮಾಡುತ್ತಿದ್ದರು. ದೆಹಲಿಯಲ್ಲಿ ನಕಲಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಬಯಲಿಗೆ ಬಂದಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಗಣಿ ಹಾಗೂ ಪೀಣ್ಯದಲ್ಲಿ ನೆಲೆಸಿದ್ದ ಆರೋಪಿಗಳು ಮೆಹದಿ ಫೌಂಡೇಶನ್ ತೆರೆದು ಯೂಟ್ಯೂಬ್ ಚಾನೆಲ್‌ನಲ್ಲಿ ಧರ್ಮ ಬೋಧನೆ ಮಾಡುತ್ತಿದ್ದ ಅಂಶಗಳ ಮೇಲೆ ತನಿಖೆ ನಡೆಸಿ ಸೂಕ್ತ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದರು. ತಾಂತ್ರಿಕ ಸಾಕ್ಷ್ಯಗಳು, ಸಿಡಿಆರ್ ರಿಪೋರ್ಟ್, ನೆಲೆಸಿರುವ ಸ್ಥಳದ ಮಾಹಿತಿ ಹಾಗೂ ಯೂಟ್ಯೂಬ್ ಚಾನೆಲ್ ವಿವರ ಕಲೆ ಹಾಕಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದ್ದರು.

ಇನ್ನೂ ಹದಿನೈದು ದಿನದಲ್ಲಿ ಮತ್ತೊಂದು ಪ್ರಕರಣದ 10 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಜಿಗಣಿ ಪೊಲೀಸರು ಸಜ್ಜಾಗಿದ್ದಾರೆ. ಆರೋಪಿಗಳ ನಕಲಿ ವೀಸಾ, ಪಾಸ್‌ಪೋರ್ಟ್ ರದ್ದು ಮಾಡುವಂತೆ ಉಲ್ಲೇಖಿಸಿ ಚಾರ್ಜ್ ಶೀಟ್ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!