ವಿದ್ಯಾರ್ಥಿಗಳಿಗೆ ಹಣದಾಸೆ ತೋರಿಸಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆಗೆ ಬಳಸುತ್ತಿದ್ದ ರಾಜಸ್ಥಾನದ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ವಿದ್ಯಾರ್ಥಿಗಳಿಗೆ ಹಣದಾಸೆ ತೋರಿಸಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆಗೆ ಬಳಸುತ್ತಿದ್ದ ರಾಜಸ್ಥಾನದ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿ, 34 ಬ್ಯಾಂಕ್ ಪಾಸ್ ಬುಕ್‌ಗಳು, 106 ಕ್ರೆಡಿಟ್/ಡೆಬಿಟ್ ಕಾರ್ಡ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಅಭಯ್ ದಾನ್ ಚರಣ್ (19), ಅರವಿಂದ್ ಕುಮಾರ್ (19), ಪವನ್ ಬಿಷ್ಣೋಯಿ (18) ಮತ್ತು ಸವಾಯಿ ಸಿಂಗ್ (21) ಬಂಧಿತರು. ಇತ್ತೀಚೆಗೆ ದುಷ್ಕರ್ಮಿಗಳು ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಕೆಲಸದ ಹೆಸರಿನಲ್ಲಿ ಕರೆ ಮಾಡಿ ಬಳಿಕ ಅಧಿಕ ಲಾಭದ ಅಮಿಷವೊಡ್ಡಿ ವಿವಿಧ ಹಂತಗಳಲ್ಲಿ 12.42 ಲಕ್ಷ ರು.ಜಮೆ ಮಾಡಿಸಿಕೊಂಡು ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್ ಪಿ.ಎನ್.ಈಶ್ವರಿ ನೇತೃತ್ವದಲ್ಲಿ ತನಿಖೆ ನಡೆಸಿ ಬೆಂಗಳೂರು ಮತ್ತು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿದ್ಯಾರ್ಥಿಗಳಿಗೆ ಗಾಳ: ರಾಜಸ್ಥಾನದಿಂದ ನಗರಕ್ಕೆ ಬರುತ್ತಿದ್ದ ಆರೋಪಿಗಳು ಪರಿಚಿತ ರಾಜಸ್ಥಾನ ಮೂಲದ ವಿದ್ಯಾರ್ಥಿಗಳ ಜತೆಗೆ ಪೇಯಿಂಗ್ ಗೆಸ್ಟ್‌ಗಳಲ್ಲಿ ತಂಗುತ್ತಿದ್ದರು. ಬಳಿಕ ಈ ವಿದ್ಯಾರ್ಥಿಗಳ ಜತೆಗೆ ಇರುತ್ತಿದ್ದ ಉತ್ತರಪ್ರದೇಶ, ಜಾರ್ಖಂಡ್, ಬಿಹಾರ ಸೇರಿ ಇತರೆ ರಾಜ್ಯಗಳ ವಿದ್ಯಾರ್ಥಿಗಳನ್ನು ಪರಿಚಯಿಸಿಕೊಂಡು ಪಾರ್ಟಿಗಳಿಗೆ ಕರೆದೊಯ್ದು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಖರ್ಚಿಗೆ ಹಣ ಕೊಟ್ಟು ಬ್ಯಾಂಕ್ ಖಾತೆ ಓಪನ್: ತಾವು ಟ್ರೇಡಿಂಗ್ ಮತ್ತು ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುತ್ತಿದ್ದು, ಇದಕ್ಕಾಗಿ ಬ್ಯಾಂಕ್ ಖಾತೆಗಳನ್ನು ತೆರೆದುಕೊಟ್ಟರೆ, ಹಣ ನೀಡುವುದಾಗಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡುತ್ತಿದ್ದರು. ಖರ್ಚಿಗೆ ಎಂದು ಸ್ವಲ್ಪ ಹಣವನ್ನೂ ನೀಡುತ್ತಿದ್ದರು. ಇವರ ಮಾತು ನಂಬಿದ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್, ಪಾನ್‌ಕಾರ್ಡ್, ಪೋಟೋ ಸೇರಿ ಇತರೆ ದಾಖಲೆಗಳನ್ನು ಆರೋಪಿಗಳಿಗೆ ಕೊಟ್ಟು ಬ್ಯಾಂಕ್ ಖಾತೆ ತೆರೆಯುತ್ತಿದ್ದರು.
ಬ್ಯಾಂಕ್ ಖಾತೆ ಸೈಬರ್ ವಂಚನೆಗೆ ಬಳಕೆ: ಆರೋಪಿಗಳು ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಪಾಸ್‌ಬುಕ್, ಚೆಕ್ ಬುಕ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಪಡೆದು ರಾಜಸ್ಥಾನಕ್ಕೆ ತೆರಳುತ್ತಿದ್ದರು. ಬಳಿಕ ಪಾರ್ಟ್ ಟೈಮ್ ಜಾಬ್, ಟಾಸ್ಕ್, ರೇಟಿಂಗ್ ನೀಡುವುದು ಸೇರಿ ವಿವಿಧ ಹೆಸರಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಅಧಿಕ ಲಾಭದ ಆಸೆ ತೋರಿಸುತ್ತಿದ್ದರು. ಬಳಿಕ ಹೂಡಿಕೆ ನೆಪದಲ್ಲಿ ಸಾರ್ವಜನಿಕರಿಂದ ಈ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು.
ಸೈಬರ್ ವಂಚನೆಯಲ್ಲಿ ಹಲವರು ಭಾಗಿ: ಅಮಾಯಕರ ಹಣವನ್ನು ಆರೋಪಿಗಳು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡ ಬಳಿಕ ಹಣವನ್ನು ವಿತ್ ಡ್ರಾ ಮಾಡುವುದು, ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವುದು, ಕ್ರಿಪ್ಟೋ ಕರೆನ್ಸಿ ಖರೀದಿ, ಡಿಜಿಟೆಲ್ ವಾಲೆಟ್‌ಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಈ ವಂಚನೆ ಗ್ಯಾಂಗ್‌ನಲ್ಲಿ ಭಾಗಿಯಾಗಿರುವ ಅನೇಕರು ತಲೆಮರೆಸಿಕೊಂಡಿರುವ ಮಾಹಿತಿ ಸಂಗ್ರಹಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿ ನೀಡಿದ ಸುಳಿವು: ಈ ₹12.42 ಲಕ್ಷ ವಂಚನೆ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರಿಗೆ ದೂರುದಾರರು ಹಣ ವರ್ಗಾವಣೆ ಮಾಡಿದ್ದ ಬ್ಯಾಂಕ್ ಖಾತೆ ವಿದ್ಯಾರ್ಥಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿಗಳು ತನ್ನ ಹೆಸರಿನಲ್ಲಿ 15 ಬ್ಯಾಂಕ್ ಖಾತೆ ತೆರೆದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿಯ ಪಿ.ಜಿ.ವೊಂದರಲ್ಲಿ ಇಬ್ಬರು ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
34 ಪಾಸ್ ಬುಕ್, 39 ಚೆಕ್ ಬುಕ್ ಜಪ್ತಿ: ಆರೋಪಿಗಳಿಂದ 19 ಮೊಬೈಲ್‌ಗಳು, 2 ಲ್ಯಾಪ್‌ಟಾಪ್, 20 ಸಿಮ್ ಕಾರ್ಡ್, 34 ಬ್ಯಾಂಕ್ ಪಾಸ್ ಬುಕ್, 106 ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, 39 ಬ್ಯಾಂಕ್ ಚೆಕ್ ಬುಕ್‌ಗಳು ಹಾಗೂ ₹75000. ನಗದು ಹಣವನ್ನು ಜಪ್ತಿ ಮಾಡಲಾಗಿದೆ.