ಸಾರಾಂಶ
ಬೆಂಗಳೂರು : ಅತಿ ವೇಗವಾಗಿ ಆ್ಯಂಬುಲೆನ್ಸ್ ಚಲಾಯಿಸಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣನಾಗಿದ್ದ ಆ್ಯಂಬುಲೆನ್ಸ್ ಚಾಲಕನನ್ನು ವಿಲ್ಸನ್ ಗಾರ್ಡನ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಅಶೋಕ್ ಬಂಧಿತ. ಈತ ಶನಿವಾರ ರಾತ್ರಿ ಸುಮಾರು 11.30ಕ್ಕೆ ಶಾಂತಿನಗರದ ಕೆ.ಎಚ್.ರಸ್ತೆಯ ಸಂಗೀತಾ ಸಿಗ್ನಲ್ ಬಳಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಆ್ಯಂಬುಲೆನ್ಸ್ ಚಲಾಯಿಸಿ 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಪೊಲೀಸ್ ಚೌಕಿ ಗುದ್ದಿ ಪರಾರಿಯಾಗಿದ್ದ. ಈ ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರರಾದ ಸೋಮೇಶ್ವರನಗರದ ನಿವಾಸಿ ಇಸ್ಮಾಯಿಲ್ (40) ಮತ್ತು ಇವರ ಪತ್ನಿ ಸಮೀನಾ ಬಾನು(33) ಮೃತಪಟ್ಟಿದ್ದರು. ಮತ್ತೊಂದು ದ್ವಿಚಕ್ರ ವಾಹನದ ಸವಾರ ಮೊಹಮ್ಮದ್ ರಿಯಾನ್ ಮತ್ತು ಹಿಂಬದಿ ಸವಾರ ಸಿದ್ಧಿಕ್ ಗಾಯಗೊಂಡಿದ್ದರು. ಹೀಗಾಗಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಆ್ಯಂಬುಲೆನ್ಸ್ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ವಿವರ:
ಭಟ್ಕಳ ಮೂಲದ ಇಸ್ಮಾಯಿಲ್ ಮತ್ತು ಸಮೀನಾ ಬಾನು ದಂಪತಿ ನಗರದ ಸೋಮೇಶ್ವರನಗರದಲ್ಲಿ ಮಕ್ಕಳೊಂದಿಗೆ ನೆಲೆಸಿದ್ದು, ಸುಧಾಮನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ರಾತ್ರಿ 11.30ಕ್ಕೆ ಹೋಟೆಲ್‌ನಲ್ಲಿ ಊಟ ಮುಗಿಸಿಕೊಂಡು ಸಿದ್ಧಯ್ಯ ರಸ್ತೆ ಕಡೆಯಿಂದ ಮನೆಗೆ ಹೊರಟ್ಟಿದ್ದರು. ಆಗ ಶಾಂತಿನಗರ ಕಡೆಯಿಂದ ಲಾಲ್‌ಬಾಗ್ ಕಡೆಗೆ ವೇಗವಾಗಿ ಬಂದ ಆ್ಯಂಬುಲೆನ್ಸ್ ಕೆ.ಎಚ್.ರಸ್ತೆಯ ಸಂಗೀತಾ ಸಿಗ್ನಲ್ ಬಳಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.
ಆ್ಯಂಬುಲೆನ್ಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲಿಸಿದ್ದು, ದಂಪತಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಆ್ಯಂಬುಲೆನ್ಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಘಟನೆ ವೇಳೆ ಆ್ಯಂಬುಲೆನ್ಸ್‌ನಲ್ಲಿ ರೋಗಿಗಳು ಇರಲಿಲ್ಲ. ಚಾಲಕ ಅಶೋಕ್ ಮದ್ಯ ಸೇವಿಸಿರಲಿಲ್ಲ ಎಂಬುದು ತಿಳಿದು ಬಂದಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಚೌಕಿ ಡಿಕ್ಕಿ:ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರರಾದ ಇಸ್ಮಾಯಿಲ್ ದಂಪತಿ ಆ್ಯಂಬುಲೆನ್ಸ್‌ಗೆ ಸಿಲುಕಿದ್ದು, ಆ ಆ್ಯಂಬುಲೆನ್ಸ್ ಸುಮಾರು 50 ಮೀಟರ್ ದೂರು ಎಳೆದುಕೊಂಡು ಪೊಲೀಸ್ ಚೋಕಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಂದು ದ್ವಿಚಕ್ರ ವಾಹನದ ಸವಾರರಾದ ರಿಯಾನ್ ಹಾಗೂ ಸಿದ್ಧಿಕ್ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಸ್ಥಳೀಯರು ರೊಚ್ಚಿಗೆದ್ದು ಆ್ಯಂಬುಲೆನ್ಸ್ ರಸ್ತೆಗೆ ಉರುಳಿಸಿದ್ದರು.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))