ವಿವಿಧ ಬೇಡಿಕೆ ಈಡೇರಿಕೆಗೆ ಪಿಯು ಶಿಕ್ಷಕರ ಆಗ್ರಹ

| N/A | Published : Nov 03 2025, 10:37 AM IST

vidhan soudha

ಸಾರಾಂಶ

 ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ (ಡಯಟ್‌) ಉಪನ್ಯಾಸಕರ ನಿಯೋಜನೆ ಕೈಬಿಡಬೇಕು ಮೌಲ್ಯಮಾಪನಕ್ಕೆ ಸಂಬಂಧಿಸಿದ ಬಾಕಿ ಮೊತ್ತ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಯು ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತೀರ್ಮಾನಿಸಿದ್ದಾರೆ.

  ಬೆಂಗಳೂರು : ಸರ್ಕಾರಿ ಪಿಯು ಕಾಲೇಜುಗಳ ಶೈಕ್ಷಣಿಕ ಸ್ಥಿತಿಗತಿ ಪರಿಶೀಲನೆಗೆ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ (ಡಯಟ್‌) ಉಪನ್ಯಾಸಕರ ನಿಯೋಜನೆ ಕೈಬಿಡಬೇಕು, ಕಳೆದ ವರ್ಷದ ಪಿಯು ಪರೀಕ್ಷಾ ಮೌಲ್ಯಮಾಪನಕ್ಕೆ ಸಂಬಂಧಿಸಿದ ಬಾಕಿ ಮೊತ್ತ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲು ರಾಜ್ಯ ಪಿಯು ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತೀರ್ಮಾನಿಸಿದ್ದಾರೆ.

ಭಾನುವಾರ ಶಾಸಕರ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಎರಡು ಹಂತದ ಹೋರಾಟಕ್ಕೆ ನಿರ್ಣಯಿಸಲಾಗಿದೆ.

ಸಭೆಯ ನಿರ್ಣಯಗಳ ಕುರಿತು ಮಾಹಿತಿ

ಸಭೆಯ ನಿರ್ಣಯಗಳ ಕುರಿತು ಮಾಹಿತಿ ನೀಡಿರುವ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ.ಎನ್‌.ನಿಂಗೇಗೌಡ ಅವರು, ಮೊದಲ ಹಂತವಾಗಿ ಎರಡು ಸಂಘಟನೆಗಳು ಜಿಲ್ಲಾಮಟ್ಟದಲ್ಲಿ ನ.7ರಂದು ಆಯಾ ಜಿಲ್ಲಾ ಪಿಯು ಉಪನಿರ್ದೇಶಕ ಕಚೇರಿಯಿಂದ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸುವುದು. 2ನೇ ಹಂತದಲ್ಲಿ ಮುಂದಿನ 20 ದಿನದೊಳಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ದಿನದ ಬೃಹತ್‌ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಬೇಡಿಕೆಗಳೇನು?:

1. ಪಿಯು ಶೈಕ್ಷಣಿಕ ಸ್ಥಿತಿಗತಿ ಪರಿಶೀಲನೆಯನ್ನು ಡಯಟ್‌ ಉಪನ್ಯಾಸಕರಿಂದ ನಡೆಸಲು ಹೊರಡಿಸಿರುವ ಸುತ್ತೋಲೆ ಹಿಂಪಡೆಯಬೇಕು.

2. ಪಿಯು ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗೂ ಪಾಠ ಮಾಡಲು ಅವಕಾಶವಾಗುವಂತೆ ಇಲಾಖೆ ತಿದ್ದುಪಡಿ ಮಾಡಿರುವ ನಿಯಮಾವಳಿ ಕಡತವನ್ನು ಶಿಕ್ಷಣ ಸಚಿವರು ತಿರಸ್ಕರಿಸಬೇಕು.

3. 2024-25ನೇ ಸಾಲಿಗೆ ಬಾಕಿ ಇರುವ 13.5 ಕೋಟಿ ರು. ಮೌಲ್ಯಮಾಪನ ಭತ್ಯೆ ಮತ್ತು ಸಂಭಾವನೆ ಕೂಡಲೇ ಬಿಡುಗಡೆ ಮಾಡಬೇಕು.

4. ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು.

5. ಪಿಯು ಪರೀಕ್ಷಾ ವಿಭಾಗವನ್ನು ಪ್ರತ್ಯೇಕಗೊಳಿಸಬೇಕು.

6. ಪಿಯು ಇಲಾಖೆಯಲ್ಲಿ ಪರೀಕ್ಷೆ ಮತ್ತು ಶೈಕ್ಷಣಿಕ ಸುಧಾರಣೆಗೆ ಅಕಾಡೆಮಿ ಕೌನ್ಸಿಲ್ ಸಮಿತಿ ರಚಿಸಬೇಕು.

7. ಕೆಪಿಎಸ್‌ ಶಾಲೆಗಳ ಆಡಳಿತ ಮತ್ತು ಆರ್ಥಿಕ ಅಧಿಕಾರವನ್ನು ಆಯಾ ಶಾಲೆಯ ಪಿಯು ಪ್ರಾಂಶುಪಾಲರಿಗೆ ನೀಡಬೇಕು.

8. ವಿದ್ಯಾರ್ಥಿ, ಉಪನ್ಯಾಸಕರ ಅನುಪಾತವನ್ನು 180:1ಕ್ಕೆ ಇಳಿಸಿ ಪ್ರತಿ ತರಗತಿಗೆ 45:1 ರ ಅನುಪಾತದಂತೆ ಮಾರ್ಪಡಿಸಬೇಕು.

9. ಅನುದಾನಿತ ಉಪನ್ಯಾಸಕರಿಗೆ ಮತ್ತು ಬೋಧಕೇತರ ಕುಟುಂಬಕ್ಕೂ ನಗದು ರಹಿತ ಚಿಕಿತ್ಸಾ ಸೌಲಭ್ಯ ವಿಸ್ತರಿಸಬೇಕು.

10. 2006ರ ಏ.1ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.

Read more Articles on