ಬಿಬಿಎಂಪಿಯ ಶಾಲಾ, ಕಾಲೇಜಿನ 72 ಅತಿಥಿ ಶಿಕ್ಷಕ, ಉಪನ್ಯಾಸಕರು ಮನೆಗೆ

| N/A | Published : Aug 23 2025, 06:49 AM IST

BBMP latest news today photo

ಸಾರಾಂಶ

ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿಗೆ ನಿಯೋಜನೆ ಮಾಡಿಕೊಂಡ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಪೈಕಿ 72 ಮಂದಿಯ ನಿಯೋಜನೆಯನ್ನು ರದ್ದುಗೊಳಿಸಲಾಗಿದೆ.

  ಬೆಂಗಳೂರು :  ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿಗೆ ನಿಯೋಜನೆ ಮಾಡಿಕೊಂಡ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಪೈಕಿ 72 ಮಂದಿಯ ನಿಯೋಜನೆಯನ್ನು ರದ್ದುಗೊಳಿಸಲಾಗಿದೆ.

ಈ ಪೈಕಿ 35 ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ನಿಗದಿತ ವಿದ್ಯಾರ್ಹತೆ ಹೊಂದಿಲ್ಲ. ಉಳಿದ 37 ಮಂದಿ ಕಳೆದ 3 ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ನೀಡಿದ್ದಾರೆ. ಹೀಗಾಗಿ ಗೌರವಧನ ಮಂಜೂರಾತಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಕಳೆದ ಸಾಲಿನಲ್ಲಿ ಬಿಬಿಎಂಪಿಯ ಶಾಲಾ, ಕಾಲೇಜುಗಳಿಗೆ ಶಿಕ್ಷಣ ಇಲಾಖೆಯ ಮಾದರಿಯಲ್ಲಿ ಎಸ್‌ಡಿಎಂಸಿ ಹಾಗೂ ಸಿಡಿಸಿ ಮೂಲಕ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪದ್ಧತಿ ಆರಂಭಿಸಲಾಗಿದೆ. ಆದೇ ರೀತಿ ಈ ಬಾರಿಯೂ 804 ಮಂದಿ ಅತಿಥಿ ಶಿಕ್ಷಕ ಮತ್ತು ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ನಿಯೋಜನೆ ಮಾಡಿಕೊಂಡಿರುವ 804 ಮಂದಿಯಲ್ಲಿ 35 ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಹತೆ ಇಲ್ಲದಿರುವುದು ದಾಖಲಾತಿ ಪರಿಶೀಲನೆ ವೇಳೆ ಕಂಡು ಬಂದಿದೆ. ಹೀಗಾಗಿ, ವಿದ್ಯಾರ್ಹತೆ ಇಲ್ಲದೇ ನಿಯೋಜನೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಪೈಕಿ 14 ಅತಿಥಿ ಶಿಕ್ಷಕರು ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದಾರೆ, ಒಬ್ಬರು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿನ 19 ಅತಿಥಿ ಉಪನ್ಯಾಸಕರಾಗಿದ್ದಾರೆ.

ಇನ್ನೂ ಕಳೆದ 3 ವರ್ಷದಲ್ಲಿ ಶೇ.50ಕ್ಕಿಂತ ಫಲಿತಾಂಶ ನೀಡಿದ 37 ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಲ್ಲಿ 34 ಮಂದಿ ಪ್ರೌಢಶಾಲೆಯ ಶಿಕ್ಷಕರಾಗಿದ್ದಾರೆ. ಉಳಿದ 3 ಮಂದಿ ಪಿಯುಸಿ ಕಾಲೇಜಿನ ಅತಿಥಿ ಉಪನ್ಯಾಸಕರಾಗಿದ್ದಾರೆಂದು ಬಿಬಿಎಂಪಿಯ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರು ಆದೇಶದಲ್ಲಿ ತಿಳಿಸಲಾಗಿದೆ.

ಹೊಸ ನೇಮಕಾತಿವರೆಗೆ 72 ಮಂದಿ ಮುಂದುವರಿಕೆ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯಾರ್ಹತೆ ಇಲ್ಲ ಹಾಗೂ ಶೇ.50 ಕ್ಕಿಂತ ಕಡಿಮೆ ಫಲಿತಾಂಶ ತಂದು ಕೊಟ್ಟ ಶಿಕ್ಷಕರು ಮತ್ತು ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗುವುದು. ಈಗಾಗಲೇ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ನೇಮಕಗೊಂಡಂತೆ ಈ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ದಿಲೀಪ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಾಯಂ ಶಿಕ್ಷಕ-ಉಪನ್ಯಾಸಕರಿಗೂ ಶಿಕ್ಷೆ

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಮಾತ್ರ ಶಿಕ್ಷೆ ನೀಡುತ್ತಿಲ್ಲ. ಬಿಬಿಎಂಪಿಯ ಶಾಲಾ-ಕಾಲೇಜಿನ ಕಾಯಂ ಶಿಕ್ಷಕ, ಉಪನ್ಯಾಸಕರಿಗೂ ಬಡ್ತಿ ತಡೆ, ವರ್ಗಾವಣೆಯ ಶಿಕ್ಷೆ ವಿಧಿಸುವುದಕ್ಕೆ ತೀರ್ಮಾನಿಸಲಾಗಿದೆ. ಈ ಕುರಿತು ಮುಖ್ಯ ಆಯುಕ್ತರಿಗೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ದಿಲೀಪ್‌ ಮಾಹಿತಿ ನೀಡಿದ್ದಾರೆ.

Read more Articles on