ದೊಡ್ಡಬಳ್ಳಾಪುರ: ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದಾಗ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಇತ್ಯರ್ಥ್ಯಗೊಳಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್‌ ಕೋಸಂಬೆ ಹೇಳಿದರು.

ಇಲ್ಲಿನ ನಗರಸಭೆ ಆವರಣದಲ್ಲಿ ನಗರಸಭೆ, ಯುವ ಸಂಚಲನ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಡಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ವಿಶೇಷ ನಗರಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಜೀವಿಸುವ ಪರಿಸರದ ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಭೆ ಆಯೋಜಿಸಲಾಗಿತ್ತು. ಮಕ್ಕಳ ಹಕ್ಕುಗಳ ಸಮಸ್ಯೆ ಆಲಿಸಲು ಈ ಮೊದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರ ಗ್ರಾಮಸಭೆ ಮಾಡಲಾಗುತ್ತಿತ್ತು. ನಗರ ಮಟ್ಟದಲ್ಲಿಯೂ ಮಕ್ಕಳು ಸಮಸ್ಯೆಗಳ ಆಗರದಲ್ಲಿ ಜೀವಿಸುತ್ತಾ ಇರುವದರಿಂದ ನಗರ ಪ್ರದೇಶಗಳಲ್ಲಿ ಮಕ್ಕಳ ವಿಶೇಷ ನಗರಸಭೆ ವಿನೂತನ ಕಾರ್ಯವಾಗಿದೆ. ಘನ ಸರ್ಕಾರಕ್ಕೆ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಮಕ್ಕಳ ವಿಶೇಷ ನಗರಸಭೆ ಆಯೋಜನೆಯ ಕುರಿತು ಸುತ್ತೋಲೆ ಹೊರಡಿಸುವಂತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಠಿಯಾಗಬೇಕು. ಸಮಾಜದಲ್ಲಿ ಪ್ರತಿಯೊಂದು ಮಗು ಅತ್ಯಂತ ಗೌರವ ಪೂರ್ವಕ, ಘನತೆಯಿಂದ ಜೀವಿಸುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ರಕ್ಷಣೆ ಹಕ್ಕು ಮತ್ತು ಭಾಗವಹಿಸುವಿಕೆ ಹಕ್ಕುಗಳನ್ನು ಹೊಂದಿರುತ್ತಾರೆ ಎಂದರು.

ಮಕ್ಕಳಿಂದ ಹಲ ಸಮಸ್ಯೆ ಅಹವಾಲು:

ಸಭೆಯಲ್ಲಿ ಶಾಲೆಗಳಲ್ಲಿನ ಶೌಚಾಲಯ, ಸ್ವಚ್ಛತೆ, ನೈರ್ಮಲ್ಯ, ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ಕೊರತೆ, ವಿದ್ಯುತ್‌, ನೀರು ಸರಬರಾಜು ಸೇರಿದಂತೆ ಕೌಟುಂಬಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಆಯೋಗದ ಮುಂದೆ ತೋಡಿಕೊಂಡರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಿ, ವಾರದೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.


ಶಾಲಾ ವಾತಾವರಣದ ದೂರು:

ಅರಳುಮಲ್ಲಿಗೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಸಂಗ್ರಹವಾಗುವ ಕಸ ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ ಹಾಗೂ ಶಾಲೆ ಪಕ್ಕದಲ್ಲೇ ಚರಂಡಿ ಇದ್ದು, ಕಲ್ಮಶ ನೀರು ಶಾಲಾವರಣಕ್ಕೆ ನುಗ್ಗಿ ದುರ್ನಾತ ಬೀರುತ್ತಿದೆ ಎಂಬ ಮಕ್ಕಳ ಪ್ರಶ್ನೆಗೆ ಉತ್ತರಿಸಿದ ಆಯೋಗದ ಅಧ್ಯಕ್ಷರು, ನಗರಸಭೆಯ ಪೌರಾಯುಕ್ತರಿಗೆ ತುರ್ತಾಗಿ ಬಿಇಇ ಮತ್ತು ಪಟ್ಟಣದ ಎಲ್ಲಾ ಶಾಲಾ ಮುಖ್ಯಶಿಕ್ಷಕರೊಂದಿಗೆ ಸಭೆ ಏರ್ಪಡಿಸಿ, ಕಸ ವಿಲೇವಾರಿ, ಶಾಲೆಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಇತರೆ ತೊಂದರೆಗಳ ಕುರಿತು ಚರ್ಚಿಸಿ, ಸಭೆಯ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಕ್ಕಳು, ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಶೌಚಾಲಯವಿದ್ದು, ಇಲ್ಲದಂತಾಗಿದೆ. ಶುಚಿಯಾದ ಆಹಾರ ಪೂರೈಕೆಯಾಗುತ್ತಿಲ್ಲವೆಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಸಮಾಲೋಚಿಸಿ, ನಿಮ್ಮ ಶಿಕ್ಷಣ ಇಲಾಖೆಗೆ ಒಳಪಡುವ ಶಾಲೆಗಳಲ್ಲಿನ ಸಮಸ್ಯೆಗಳನ್ನು ಅವಲೋಕಿಸಿ, ಸರ್ಕಾರಿ ಸೌಲಭ್ಯ, ಕೊಠಡಿ, ಶೌಚಾಲಯ, ಶಿಕ್ಷಕರ ಕೊರತೆ, ಶುಚಿ ಆಹಾರ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪಟ್ಟಿಮಾಡಿ, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕ್ರಮವಹಿಸಿ ಎಂದು ನಿರ್ದೇಶನ ನೀಡಿದರು.

ಮದ್ಯಪಾನ-ಧೂಮಪಾನ ಸಮಸ್ಯೆ:

ಸಭೆಯಲ್ಲಿ ನಗರದ ಬಹುತೇಕ ಶಾಲಾ-ಕಾಲೇಜು ಆವರಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಧೂಮಪಾನ, ಮಧ್ಯಪಾನ, ಶಾಲಾ ಆಸ್ತಿ-ಪಾಸ್ತಿ ನಾಶಗೊಳಿಸುವಿಕೆ ಹಾಗೂ ಅನೈತಿಕ ಚಟುವಟಿಕೆಗಳು ಮರುಕಳಿಸುತ್ತಿರುವ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಆಯಾ ಶಾಲೆಗೆ ಸಂಬಂಧಿಸಿದ ಪೊಲೀಸ್‌ ಸಿಬ್ಬಂದಿ ಪ್ರತಿದಿನ ಬೀಟ್‌ ಮೂಲಕ ಶಾಲಾ-ಕಾಲೇಜು ಆವರಣಗಳಲ್ಲಿ ದುರ್ಘಟನೆಗಳು ಸಂಭವಿಸದಂತೆ ನಿಗಾ ವಹಿಸಲು ಆಯೋಗದ ಅಧ್ಯಕ್ಷರು ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು.

ಮಕ್ಕಳ ರಕ್ಷಣಾ ನೀತಿ-2016ರ ಅನ್ವಯ ಶಾಲೆಯಲ್ಲಿ ಸಲಹಾ/ದೂರು ಪೆಟ್ಟಿಗೆ ಅಳವಡಿಸುವುದು, ಮಕ್ಕಳ ಸಹಾಯವಾಣಿ 1098 ಶಾಶ್ವತ ಗೋಡೆ ಫಲಕ, ಕೋಪ್ಟಾ ಕಾಯ್ದೆ-2003ರ ಅನ್ವಯ ಶಾಲಾ ಆವರಣದಲ್ಲಿ 100 ಮೀಟರ್‌ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧ ಕಾಯ್ದೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪೊಲೀಸ್‌ ಇಲಾಖೆಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದೊಂದಿಗೆ ಕರ್ತವ್ಯ ನಿಷ್ಠೆಯಿಂದ ಜಂಟಿಯಾಗಿ ಕಾರ್ಯ ನಿರ್ವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧರಾಗಬೇಕು ಎಂದರು.

ಡಾ.ಬಿ.ಆರ್‌ ಅಂಬೇಡ್ಕರ್‌ ಬಾಲಕಿಯರ ವಸತಿ ನಿಲಯದಲ್ಲಿ ಕೋತಿಗಳ ಹಾವಳಿಗೆ ಕಡಿವಾಣ ಹಾಕಿ ಮತ್ತು ವಿದ್ಯಾರ್ಥಿನಿಯರಿಗೆ ವಿತರಿಸುವ ಸ್ಯಾನಿಟರ್‌ ಪ್ಯಾಡ್‌ ಸಕಲಾಕ್ಕೆ ಶುಭ್ರತೆಯಿಂದ ನೀಡಿ ಎಂದ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಮ್ಮ, ಪೌರಾಯುಕ್ತ ಕಾರ್ತೀಕೇಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾರೆಡ್ಡಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಾಸುದೇವ ಶರ್ಮಾ, ಪ್ರಭುದೇವ, ಚಿದಾನಂದ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.9ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ರಾಜ್ಯದ ಮೊಟ್ಟಮೊದಲ ಮಕ್ಕಳ ನಗರಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್‌ ಕೋಸಂಬೆ ಮಾತನಾಡಿದರು.