ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದಿಂದ ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಪ್ರಾಂತ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಸಂಚರಿಸಿ ನೈಜ ಪರಿಸ್ಥಿತಿ, ರೈತರ ಸಂಕಷ್ಟ ಕುರಿತು ಅಧ್ಯಯನ ಮಾಡಿ ರಾಜ್ಯಪಾಲರಿಗೆ, ಕೇಂದ್ರ ಸಚಿವ ಕುಮಾರಣ್ಣನವರಿಗೆ ಜುಲೈ ಅಂತ್ಯದೊಳಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ರಾಜಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಅವರ ನಿವಾಸದಲ್ಲಿ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಅತಿ ಮಳೆಯಿಂದಾಗಿ ಅತಿವೃಷ್ಟಿಯಾಗಿತ್ತು. ಈ ವರ್ಷ ಮಳೆಯ ಅಭಾವದಿಂದ ಅನಾವೃಷ್ಟಿಯಾಗಿದೆ. ರಾಜ್ಯದಲ್ಲಿ ಕಳೆದ ವರ್ಷವೂ ರಾಜ್ಯದ ಕೃಷಿ ಮಂತ್ರಿ ಭೇಟಿ ನೀಡಿರಲಿಲ್ಲ. ಈ ವರ್ಷ ಅನಾವೃಷ್ಟಿಯಾಗಿದೆ. ಇದೀಗ ಸಂಪುಟದಲ್ಲಿ ಕೃಷಿ ಮಂತ್ರಿಯೇ ಇಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕುರಿತು ಕಿಂಚಿತ್ತು ಕಾಳಜಿಯೇ ಇಲ್ಲ ಎಂದು ದೂರಿದರು.ಕೂಡಲೇ ಸರ್ಕಾರ ಬರಗಾಲವೆಂದು ಘೋಷಣೆ ಮಾಡಿ ರೈತರ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರಧನ ನೀಡಬೇಕು. ಪ್ರತಿ ತಾಲೂಕಿಗೆ ಕುಡಿಯುವ ನೀರಿಗೆ ₹5 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ರೈತರಿಂದ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುವವರು ಸಂಕಷ್ಟದಲ್ಲಿದ್ದಾರೆ. ಇವರಿಗೂ ಸರ್ಕಾರ ಸ್ಪಂದಿಸಬೇಕಿದೆ. ಈಗಾಗಲೇ ಕೆಲ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಸರ್ಕಾರ ಎಲ್ಲ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಬೇಕು. ಬರಗಾಲದ ಅಗತ್ಯ ಕ್ರಮಗಳಾದ ಗೋಶಾಲೆ, ಮೇವು ಬ್ಯಾಂಕ್ ತೆರೆಯುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಬರ ಅಧ್ಯಯನವನ್ನು ವಿಜಯಪುರ ಜಿಲ್ಲೆಯಿಂದ ಆರಂಭಿಸಿದ್ದು. ಇಂಡಿ, ಬಸವನಬಾಗೇವಾಡಿ ತಾಲೂಕಿನಲ್ಲಿ ಸಂಚರಿಸಿ ರೈತರ ಸಮಸ್ಯೆ ಆಲಿಸಿದೆ. ಈ ಭಾಗದಲ್ಲಿ ಮಳೆಯಾಗಿದ್ದರೆ ಈಗಾಗಲೇ ತೊಗರಿ, ಮೆಕ್ಕೆಜೋಳ, ಹತ್ತಿ ಬಿತ್ತನೆಯಾಗಿರುತ್ತಿತ್ತು. ಜುಲೈ ತಿಂಗಳು ಬಂದರೂ ಬಿತ್ತನೆಯಾಗಿಲ್ಲ. ಜಿಲ್ಲೆಯಲ್ಲಿ 116 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಐದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಲ್ಲಿ ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಮಾಡಿದ ರೈತರು ಮಳೆಯಿಲ್ಲದೇ ಬೆಳೆ ನಾಶವಾಗುತ್ತಿವೆ. ತಮಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ರೈತರು ಮನವಿ ಮಾಡಿದ್ದಾಗಿ ಹೇಳಿದರು.ಸಿಎಂ ಡಿ.ಕೆ.ಶಿವಕುಮಾರ ಅವರು ರಾಜ್ಯದ ಜಲಾಶಯದಲ್ಲಿ ನೀರಿಲ್ಲ. ಯಾರೂ ಬಿತ್ತನೆ ಮಾಡಬಾರದು ಎಂಬ ಲಘು ಹೇಳಿಕೆ ನೀಡಿರುವುದನ್ನು ನಾವು ನೋಡಿಯೇ ಇಲ್ಲ. ನಾವು ಕಾಟಾಚಾರಕ್ಕೆ ಬರ ಅಧ್ಯಯನ ಮಾಡಲು ಬಂದಿಲ್ಲ. ಇಲ್ಲಿನ ನೈಜ ಪರಿಸ್ಥಿತಿ, ರೈತರ ಸಂಕಷ್ಟಗಳನ್ನು ಅರಿಯಲು ಬಂದಿದ್ದು. ಅದರ ಕುರಿತು ಅಧ್ಯಯನ ವರದಿ ಸಲ್ಲಿಸಲಾಗುವದು ಎಂದರು.
ಈ ವೇಳೆ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಜೆಡಿಎಸ್ ರಾಜ್ಯ ಹಿರಿಯ ಉಪಾದ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ, ಮಾಜಿ ಶಾಸಕ ದೊಡ್ಡನಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಕೊಪ್ಪಳದ ಚಂದ್ರಶೇಖರ, ಮುಖಂಡರಾದ ರವಿ ಪಟ್ಟಣಶೆಟ್ಟಿ, ಬಸವರಾಜ ಅವಟಿ, ಮಲ್ಲಿಕಾರ್ಜುನ ಅವಟಿ, ಅಪ್ಸರಾಬೇಗಂ ಚಪ್ಪರಬಂದ, ಮನ್ನಾನ ಶಾಬಾದಿ, ಸಂಗಯ್ಯ ಕಂದಗಲ್ಲ, ರಾಜು ಪಾಟೀಲ ಸೇರಿದಂತೆ ಇತರರು ಇದ್ದರು.
-----------
ಬಾಕ್ಸ್ರೈತ ಸಾಲ ಮನ್ನಾಗೆ ನಿಖಿಲ್ ಆಗ್ರಹ
2018ರ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಕುಮಾರಣ್ಣ ತಮ್ಮ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ರೈತರ ಪರ ಚಿಂತನೆ ಮಾಡುತ್ತಿಲ್ಲ. ಬಿಡದಿ ವಿಚಾರದಲ್ಲಿ ರೈತರ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕುತ್ತಿದೆ. ಇದು ಸರಿಯಲ್ಲ. ಈ ಕುರಿತು ನಾವು ರೈತರ ಅದಾಲತ್ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಅಲ್ಲಿನ ನೈಜ ಸ್ಥಿತಿ ಬಗ್ಗೆ ಗಮನಕ್ಕೆ ತರಲಾಗುವದು. ಆಡಳಿತಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ಚುನಾವಣೆಯ ಪ್ರಣಾಳಿಕೆಯಲ್ಲಿ ನೀರಾವರಿ ಯೋಜನೆಗೆ ಪ್ರತಿವರ್ಷ ₹ 1ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದರ ಕುರಿತು ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.------
ಕೋಟ್ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂಬರುವ ಜಿಪಂ,ತಾಪಂ ಚುನಾವಣೆಯಲ್ಲಿಯೂ ಇರುತ್ತದೆ. ಇದರ ಬಗ್ಗೆ ಯಾವುದೇ ಸಂದೇಹ ಬೇಡ, ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವ ಸದುದ್ದೇಶದಿಂದ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಮುಂಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಬೇಕಾದ ಕಾರ್ಯಯೋಜನೆಗಳನ್ನು ಹಾಕಿ ಒಟ್ಟಾಗಿ ಹೋರಾಟ ಮಾಡಲಾಗುತ್ತದೆ.
- ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷಬರಗಾಲವೆಂದು ಘೋಷಿಸಿ, ರೈತರಿಗೆ ಪರಿಹಾರ ನೀಡಿ, ಜುಲೈನೊಳಗೆ ಕುಮಾರಸ್ವಾಮಿಗೆ ಬರ ಅಧ್ಯಯನ ವರದಿ ಸಲ್ಲಿಕೆ, ನಿಖಿಲ್ ಕುಮಾರಸ್ವಾಮಿ