ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮುಂಗಾರು ಮಳೆ ವೈಫಲ್ಯದಿಂದಾಗಿ ಜನ ಜಾನುವಾರುಗಳಿಗೆ ನೀರಿಲ್ಲ. ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕೂಡಲೇ ನೀರು ಹರಿಸಿ, ಕಡ್ಲೇವಾಡ ಪಿಸಿಎಚ್ ಕೆರೆ ತುಂಬಿಸುವುದರ ಮೂಲಕ ರೈತರ ನೆರವಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಧಾವಿಸುವಂತೆ ಆಗ್ರಹಿಸಿ ತಾಲೂಕಿನ ಮುಳಸಾವಳಗಿ, ಇಂಗಳಗಿ, ನಿವಾಳಖೇಡ, ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಕೆರೆಯಲ್ಲಿ ಜಾನುವಾರಗಳೊಂದಿಗೆ ಧರಣಿ ಕುಳಿತು ವಿನೂತನ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಸಾಹೇಬಗೌಡ ರೆಡ್ಡಿ ಮಾತನಾಡಿ, ಚಿಮ್ಮಲಗಿ ಕಾಲುವೆಗೆ ಬೇಸಿಗೆ ಸಮಯದಲ್ಲಿ ನೀರು ಹರಿಸಲಾಗಿದ್ದು, ಕೆರೆಗಳಲ್ಲಿ ಶೇ.60 ರಷ್ಟು ನೀರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವಿಕವಾಗಿ ಕೆರೆಗಳಿಗೆ ಬಂದು ನೋಡಿದರೆ ಶೇ.5 ರಷ್ಟು ನೀರಿಲ್ಲ. ಕಳೆದ ಎರಡು ತಿಂಗಳುಗಳಿಂದ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಕೆರೆ ತುಂಬುತ್ತಿಲ್ಲ. ಇದರಿಂದ ಈ ಕೆರೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು, ಜಾನುವಾರಗಳ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಜಿಲ್ಲೆಯ ಇತರ ತಾಲೂಕುಗಳ ಕಾಲುವೆಗಳಲ್ಲಿ ನಿರಂತರ ನೀರು ಹರಿಸಲಾಗಿದೆ. ಆದರೆ, ಚಿಮ್ಮಲಗಿ ಕಾಲುವೆಯನ್ನು ಸಂಪೂರ್ಣ ಮರೆಯಲಾಗಿದೆ. ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು.

ಶೀಘ್ರ ಕಾಲುವೆ ಮೂಲಕ ಉಪ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸಿ ನಮ್ಮ ಕೆರೆಗೆ ನೀರು ತುಂಬಿಸಲು ಕೆಬಿಜೆಎನ್ಎಲ್ ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲದಿದ್ದರೆ ವಿಜಯಪುರ ಜಿಲ್ಲಾಧಿಕಾರಿಗಳ ಹಾಗೂ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ ದೇವರಹಿಪ್ಪರಗಿಯ ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು