ವಾಹನವನ್ನು ಅತಿ ವೇಗವಾಗಿ ಚಲಾಯಿಸಿದ ಮಾತ್ರಕ್ಕೆ ಚಾಲಕ ಅವಸರ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಎಂಬುದಾಗಿ ಹೇಳಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ವಾಹನವನ್ನು ಅವಸರ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಅಪಘಾತ ಮಾಡಿದ ಪ್ರಕರಣದ ಶಿಕ್ಷೆ ರದ್ದು ಮಾಡಿ ಆದೇಶ
ವೆಂಕಟೇಶ್ ಕಲಿಪಿ
ಬೆಂಗಳೂರು : ವಾಹನವನ್ನು ಅತಿ ವೇಗವಾಗಿ ಚಲಾಯಿಸಿದ ಮಾತ್ರಕ್ಕೆ ಚಾಲಕ ಅವಸರ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಎಂಬುದಾಗಿ ಹೇಳಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ವಾಹನವನ್ನು ಅವಸರ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಅಪಘಾತ ಮಾಡಿ, ನಾಲ್ವರು ಪ್ರಯಾಣಿಕರ ಸಾವಿಗೆ ಕಾರಣವಾದ ಅಪರಾಧದ ಮೇಲೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಉಳ್ಳಂಬಳ್ಳಿ ಗ್ರಾಮ ನಿವಾಸಿ ಮಗೇಶನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ತನಿಖಾಧಿಕಾರಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಟೈರ್ ಸ್ಫೋಟಗೊಂಡ ನಂತರ ‘ಸುಮೋ’ ವಾಹನ ಅಪಘಾತಕ್ಕೆ ಒಳಗಾಗಿದೆ ಎಂದು ಉಲ್ಲೇಖಿಸಿದ್ದಾರೆ. ಅದನ್ನು ಸಾಕ್ಷಿಗಳು ಒಪ್ಪಲು ನಿರಾಕರಿಸಿದ್ದರೂ ತನಿಖಾಧಿಕಾರಿ ಸಲ್ಲಿಸಿರುವ ಫೋಟೋಗಳಿಂದ ವಾಹನದ ಹಿಂದಿನ ಎಡಭಾಗದ ಚಕ್ರ ಪಂಚರ್ ಆಗಿರುವುದು ತಿಳಿಯುತ್ತದೆ. ಈ ಕುರಿತು ಸರ್ಕಾರಿ ಅಭಿಯೋಜಕರು, ಮೋಟಾರು ವಾಹನ ಇನ್ಸ್‌ಪೆಕ್ಟರ್ ಸಹ ಸೂಕ್ತ ವಿವರಣೆ ನೀಡಿಲ್ಲ. ಇದರಿಂದ ಚಕ್ರ ಸ್ಫೋಟಗೊಂಡ ಕಾರಣಕ್ಕೆ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಎಂಬ ಆರೋಪಿ ಪರ ವಕೀಲರ ವಾದವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸಾಕ್ಷ್ಯ ನುಡಿದಿಲ್ಲ:
ಅಲ್ಲದೆ, ಪ್ರಕರಣದ ಯಾವೊಬ್ಬ ಸಾಕ್ಷಿಯೂ ಚಾಲಕ ಮಗೇಶ್, ಅವಸರ ಮತ್ತು ನಿರ್ಲಕ್ಷ್ಯದಿಂದ ಸುಮೊವನ್ನು ಚಾಲನೆ ಮಾಡಿದ್ದರಿಂದಲೇ ಅಪಘಾತ ನಡೆದಿದೆ ಎಂಬುದಾಗಿ ಸಾಕ್ಷ್ಯ ನುಡಿದಿಲ್ಲ. ಬದಲಾಗಿ ‘ಚಾಲಕ ಸುಮೋವನ್ನು ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದ’ ಎಂದಷ್ಟೇ ಸಾಕ್ಷ್ಯ ದಾಖಲಿಸಿದ್ದಾರೆ. ಅಪಘಾತ ನಡೆದಾಗ ಸುಮೋ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿತ್ತು. ಬಹುಶಃ ರಾಷ್ಟ್ರೀಯ ಹೆದ್ದಾರಿ ಎಂಬ ಕಾರಣಕ್ಕೆ ಚಾಲಕ ಅತಿ ವೇಗದಲ್ಲಿ ಚಾಲನೆ ಮಾಡಿರಬಹುದು. ಆದರೆ, ಅತಿವೇಗದ ಚಾಲನೆ ಮಾಡಿದ ಮಾತ್ರಕ್ಕೆ ಅದನ್ನು ನಿರ್ಲಕ್ಷ್ಯದ ಮತ್ತು ಅವಸರದ ಚಾಲನೆಯೆಂದು ಹೇಳಲಾಗದು ಎಂದು ಹೈಕೋರ್ಟ್ ಆದೇಶಿಸಿ, ಮಗೇಶ್‌ನನ್ನು ಖುಲಾಸೆಗೊಳಿಸಿದೆ.
ನಾಲ್ವರು ಬಲಿ; ಐವರು ಗಾಯ:
2013ರ ಫೆ.10ರಂದು ಬೆಳಗ್ಗೆ 10.30ರಲ್ಲಿ ಮಗೇಶ್ ಚಾಲನೆ ಮಾಡುತ್ತಿದ್ದ ಟಾಟಾ ಸುಮೋ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಕೆಎಸ್‌ಆರ್‌ಟಿಸಿ ಬಸ್ಸೊಂದರ ಹಿಂಭಾಗಕ್ಕೆ ಗುದ್ದಿತ್ತು. ಘಟನೆಯಲ್ಲಿ ಸುಮೋದಲ್ಲಿದ್ದ ನಾಲ್ವರು ಸಾವಿಗೀಡಾದರೆ, ಐವರು ಗಾಯಗೊಂಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಮಗೇಶ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮಂಡ್ಯ ಜಲ್ಲೆಯ ಶ್ರಿರಂಗಪಟ್ಟಣದ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಗೇಶ್‌ನನ್ನು ಅವಸರ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿ ಮಾನವ ಜೀವಕ್ಕೆ ಅಪಾಯ ಉಂಟು ಮಾಡಿದ ಮತ್ತು ಸಾವಿಗೆ ಕಾರಣವಾದ ಅಪರಾಧದಡಿ ದೋಷಿಯಾಗಿ ತೀರ್ಮಾನಿಸಿತ್ತು. ಜೊತೆಗೆ, ಗರಿಷ್ಠ ಎರಡು ವರ್ಷ ಜೈಲು ಮತ್ತು 10 ಸಾವಿರ ರು. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿತ್ತು. ಇದರಿಂದ ಮಗೇಶ್ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿ, ತನ್ನನ್ನು ನಿರ್ದೋಷಿಯೆಂದು ಪ್ರಕಟಿಸಬೇಕು ಹಾಗೂ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದ.
ಮೇಲ್ಮನವಿದಾರನ ಪರ ವಕೀಲ ಡಿ.ಮೋಹನ್ ಕುಮಾರ್, ಪ್ರಕರಣದ ಯಾವೊಬ್ಬ ಸಾಕ್ಷಿಯೂ ಮಗೇಶ್ ಅವಸರ ಮತ್ತು ನಿರ್ಲಕ್ಷ್ಯದಿಂದ ಸುಮೋ ಚಾಲನೆ ಮಾಡುತ್ತಿದ್ದ ಎಂದು ಸಾಕ್ಷ್ಯ ನುಡಿದೇ ಇಲ್ಲ. ವಾಸ್ತವವಾಗಿ ಚಲನೆಯಲ್ಲಿದ್ದಾಗಲೇ ಸುಮೋ ಹಿಂಬದಿ ಎಡ ಚಕ್ರ ಸ್ಫೋಟಗೊಂಡಿತ್ತು. ಇದರಿಂದ ಸುಮೋ ಮಗೇಶ್‌ನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿ ಬಿದ್ದಿತ್ತು. ಈ ಅಂಶ ಪರಿಗಣಿಸದೆ ಮಗೇಶ್‌ನನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯಗಳ ತೀರ್ಪು ದೋಷಪೂರಿತವಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.
ಸರ್ಕಾರಿ ಅಭಿಯೋಜಕರು, ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರು, ‘ಮಗೇಶ್ ಅತಿ ವೇಗದಲ್ಲಿ ಸುಮೋ ಚಾಲನೆ ಮಾಡುತ್ತಿದ್ದರು. ಇದರಿಂದಲೇ ಅಪಘಾತ ಸಂಭವಿಸಿದೆ. ಸುಮೊ ಹಿಂಬದಿ ಚಕ್ರ ಸ್ಫೋಟವಾಗಿರುವುದಕ್ಕೆ ಸಾಕ್ಷ್ಯವಿಲ್ಲ ಎಂದು ಪ್ರತಿಪಾದಿಸಿ, ಮಗೇಶ್ ಮೇಲ್ಮನವಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
