ಆರ್‌ಎಸ್‌ಎಸ್‌ನವರು ಪಥಸಂಚಲನದ ಮಾಹಿತಿ ನೀಡಿದ್ದಾರೆಯೇ ಹೊರತು ಅನುಮತಿ ಕೇಳಿಲ್ಲ. ನೋಂದಣಿ ಮಾಡದ ಸಂಸ್ಥೆ ಅನುಮತಿಯನ್ನೂ ಕೇಳದೆ ಪಥಸಂಚಲನ ಮಾಡುತ್ತೇವೆ ಎಂದರೆ ಅವರಿಗೆ ರಕ್ಷಣೆ ನೀಡಲು ನಾವೇನು ಅವರ ಗುಲಾಮರೇ ಎಂದು ಪ್ರಿಯಾಂಕ್‌ ಪ್ರಶ್ನಿಸಿದರು.

 ಬೆಂಗಳೂರು : ‘ಆರ್‌ಎಸ್‌ಎಸ್‌ ಕೇವಲ ಒಂದು ನೋಂದಣಿ ಆಗದ ಎನ್‌ಜಿಒ. ದೇಶ ಸೇವೆ ಸಲ್ಲಿಸುವುದಾಗಿ ಹೇಳಿ ತೆರಿಗೆ ತಪ್ಪಿಸಿಕೊಳ್ಳುವ ಇವರ ಮಾತು ಕೇಳಲು ನಾವೇನು ಆರ್‌ಎಸ್‌ಎಸ್‌ ಗುಲಾಮರಾ? ಅಥವಾ ಸರ್ಕಾರದವರೇನು ಅವರ ಆಳು ಮಕ್ಕಳಾ?’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಹರಿಹಾಯ್ದಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶ ಸೇವೆ ಸಲ್ಲಿಸುವುದಾಗಿ ಹೇಳುತ್ತಾ ತೆರಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಅವರನ್ನು ದೇಶ ಭಕ್ತರನ್ನಾಗಿ ಮಾಡಲು ಹೇಗೆ ಸಾಧ್ಯ? ಆರ್‌ಎಸ್‌ಎಸ್ ಅಧಿಕೃತವಾಗಿ ನೋಂದಾಯಿತ ಸಂಸ್ಥೆಯಲ್ಲ ಎಂದು ಲಿಖಿತವಾಗಿ ತಿಳಿಸಿದೆ. ಆ ಸಂಸ್ಥೆ ನಿಜವಾಗಿಯೂ ದೇಶ ಸೇವೆ ಸಲ್ಲಿಸುತ್ತಿದ್ದರೆ ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು? ನೋಂದಣಿ ಆಗದ ಈ ಸಂಸ್ಥೆ ಮುಖ್ಯಸ್ಥರಿಗೆ ಪ್ರಧಾನಿ, ಗೃಹ ಸಚಿವರಿಗೆ ನೀಡುವ ಪ್ರೊಟೋಕಾಲ್‌ ಭದ್ರತೆ ಯಾಕೆ ನೀಡಬೇಕು? ಎಂದು ಕಿಡಿಕಾರಿದರು.

ಮಾಹಿತಿ ನೀಡಿದ್ದಾರೆಯೇ ಹೊರತು ಅನುಮತಿ ಕೇಳಿಲ್ಲ

ಆರ್‌ಎಸ್‌ಎಸ್‌ನವರು ಪಥಸಂಚಲನದ ಮಾಹಿತಿ ನೀಡಿದ್ದಾರೆಯೇ ಹೊರತು ಅನುಮತಿ ಕೇಳಿಲ್ಲ. ನೋಂದಣಿ ಮಾಡದ ಸಂಸ್ಥೆ ಅನುಮತಿಯನ್ನೂ ಕೇಳದೆ ಪಥಸಂಚಲನ ಮಾಡುತ್ತೇವೆ ಎಂದರೆ ಅವರಿಗೆ ರಕ್ಷಣೆ ನೀಡಲು ನಾವೇನು ಅವರ ಗುಲಾಮರೇ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ಅನ್ನು ಇಡೀ ಸಮಾಜ ಒಪ್ಪಿಲ್ಲ

ಆರ್‌ಎಸ್‌ಎಸ್ ಅನ್ನು ಇಡೀ ಸಮಾಜ ಒಪ್ಪಿಲ್ಲ. ಸರ್ಕಾರಿ ಜಾಗಗಳಲ್ಲಿ ಯಾರೇ ಚಟುವಟಿಕೆ ಮಾಡಿದರೂ ಅನುಮತಿ ಪಡೆಯಬೇಕು. ನಾವು ಆರ್‌ಎಸ್‌ಎಸ್‌ನ ಆಳು ಮಕ್ಕಳಲ್ಲ. ಅನುಮತಿ ಪಡೆಯುವುದಿಲ್ಲ ಎಂದಾದರೆ ಖಾಸಗಿ ಜಾಗ, ನಿಮ್ಮವರ ಒಡೆತನದ ಜಾಗಗಳಲ್ಲಿ ಪಥಸಂಚಲನ ಮಾಡಿಕೊಳ್ಳಿ ಎಂದು ಪ್ರಿಯಾಂಕ್‌ ಹೇಳಿದರು.

ನೀವು ದೇಶ, ಸಂಸ್ಕೃತಿ, ಐಕ್ಯತೆಗೆ ದುಡಿಯುತ್ತಿದ್ದರೆ ದೊಣ್ಣೆಹಿಡಿದು ಪಥಸಂಚಲನ ಮಾಡಬೇಕಿಲ್ಲ. ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಿಗೆ ವೇತನ ಅಥವಾ ಗೌರವಧನ ಕೊಡುತ್ತಿದ್ದಾರಲ್ಲ, ಅದರ ಲೆಕ್ಕ ಕೊಡಿ. ಪ್ರತಿ ನೋಂದಾಯಿತ ಸಂಸ್ಥೆಗಳು 6 ತಿಂಗಳಿಗೊಮ್ಮೆ ಲೆಕ್ಕ ನೀಡಬೇಕು. ಹೀಗಾಗಿಯೇ ಇವರು ನೋಂದಣಿ ಮಾಡಿಕೊಳ್ಳುತ್ತಿಲ್ಲ ಎಂದರು.