ಬೆಂಗಳೂರು : ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಅದನ್ನು ನಾವು ಪಾಲಿಸಬೇಕು. ಉಳಿದಂತೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ. ಪಕ್ಷದ ವರಿಷ್ಠರು ಸೇರಿ ಮಾತನಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಅಧಿಕಾರ ಹಂಚಿಕೆ ಕುರಿತು ನನ್ನ ಪರ, ವಿರುದ್ಧ ಹೇಳಿಕೆಗಳನ್ನು ಶಾಸಕರು, ಸಚಿವರು ಸೇರಿ ಯಾರೇ ನೀಡುತ್ತಿರಬಹುದು. ಆದರೆ ಆ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆಗಳೇ ಹೊರತು ಪಕ್ಷಕ್ಕೆ ಒಳ್ಳೆಯದು ಮಾಡುವುದಿಲ್ಲ. ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದ್ದಾರೆ ಎಂದರು.
ಹೈಕಮಾಂಡ್ ಬೇಗ ಗೊಂದಲ ಇತ್ಯರ್ಥ ಮಾಡಬೇಕು
ಹೈಕಮಾಂಡ್ ಬೇಗ ಗೊಂದಲ ಇತ್ಯರ್ಥ ಮಾಡಬೇಕು ಎನ್ನುವ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿ, ನನಗೆ ಯಾವುದೇ ಗೊಂದಲವಿಲ್ಲ. ಗೊಂದಲ ಬೇರೆಯವರಿಗೆ ಇರಬಹುದು ಎಂದು ಹೇಳಿದರು.
ದೆಹಲಿಯಿಂದ ನೀವು ಶುಭ ಸುದ್ದಿ ತರುತ್ತೀರಿ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಪ್ರತಿದಿನವೂ ನನಗೆ ಶುಭದಿನ ಎಂದು ತಿಳಿಸಿದರು.
ದೆಹಲಿಗೆ ಹೋಗುತ್ತಿದ್ದು ಯಾರು ಸಿಗುತ್ತಾರೋ ಅವರನ್ನು ಭೇಟಿ ಮಾಡುತ್ತೇನೆ. ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ, ಬಿಡುವಿದ್ದರೆ ಭೇಟಿಯಾಗುತ್ತೇನೆ. ವಿವಿಧ ಚುನಾವಣೆಗಳು ಮತ್ತು ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಾಗುವುದು. ಕೆಲ ರಾಜ್ಯಗಳ ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆಯಿದೆ. ಅದರ ಕುರಿತು ಚರ್ಚೆ ನಡೆಸಲು ಹೈಕಮಾಂಡ್ ನಾಯಕರು ನನ್ನನ್ನು ಕರೆದಿದ್ದಾರೆ. ಅದಕ್ಕಾಗಿ ಹೋಗುತ್ತಿದ್ದೇನೆ ಎಂದರು.
ಖರ್ಗೆ, ಪ್ರಿಯಾಂಕಾ ಸಭೆಯಲ್ಲಿ ಡಿಕೆ
ನವದೆಹಲಿ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ದೆಹಲಿಗೆ ಬಂದಿಳಿದಿದ್ದಾರೆ. ಅಸ್ಸಾಂ ಚುನಾವಣೆ ಸಂಬಂಧ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ಕರೆಯಲಾಗಿದ್ದ ಎಐಸಿಸಿ ಸಭೆಯಲ್ಲಿ ಅವರು ಪಾಲ್ಗೊಂಡರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ನಾಯಕರ ಭೇಟಿಗಾಗಿಯೇ ನಾನು ದೆಹಲಿಗೆ ಬಂದಿದ್ದೇನೆ. ಸಮಯ ಕೊಟ್ಟರೆ ಎಲ್ಲಾ ನಾಯಕರನ್ನು ಭೇಟಿ ಮಾಡೇ ಮಾಡುತ್ತೇನೆ. ಹೈಕಮಾಂಡ್ ಸೇರಿ ಯಾರ್‍ಯಾರು ಸಿಗ್ತಾರೆ, ಅವರೆಲ್ಲರ ಭೇಟಿ ಮಾಡುತ್ತೇನೆ. ಆದರೆ, ಒನ್-ಟು-ಒನ್ ಭೇಟಿಗೆ ಯಾರ ಬಳಿಯೂ ಅವಕಾಶ ಕೇಳಿಲ್ಲ. ಅವಕಾಶ ಸಿಕ್ಕರೆ ಒನ್-ಟು-ಒನ್ ಮಾತುಕತೆಯನ್ನೂ ನಡೆಸುವೆ ಎಂದರು.
