ಮದ್ದೂರು : ತಾಲೂಕಿನ ಗೆಜ್ಜಲಗೆರೆ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕಳೆದ ಗುರುವಾರ ಸಂಭವಿಸಿದ್ದ ರಾಸಾಯನಿಕ ದ್ರವ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕ ಶಿವಕುಮಾರ್ ಪರಿಸ್ಥಿತಿ ಗಂಭೀರವಾಗಿದೆ. ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ ಮುಖಂಡರು ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕನ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಕಾರ್ಮಿಕ ಶಿವಕುಮಾರ್‌ಗೆ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕರ್ನಾಟಕ ಇಂಡಿಪೆಂಡೆಂಟ್ ಗಾರ್ಮೆಂಟ್ ವರ್ಕರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎ.ಎಚ್.ಜಯರಾಮ್, ಕಾರ್ಯಕಾರಿ ಸಮಿತಿ ಸದಸ್ಯೆ ಮಂಜುಳಾ ಮೋಹನ್ ತಿಳಿಸಿದರು.
ಗಾರ್ಮೆಂಟ್ಸ್ ನ ಪ್ರಿಂಟಿಂಗ್ ವಿಭಾಗದ ಸಹಾಯಕ ಶಿವಕುಮಾರ್ ಹೊರತುಪಡಿಸಿ ಘಟನೆಯಲ್ಲಿ ಗಾಯಗೊಂಡಿದ್ದ ಪ್ರಿಂಟಿಂಗ್ ಆಪರೇಟರ್ ಪ್ರಸನ್ನ ಹಾಗೂ ವೆಲ್ಡಿಂಗ್ ಕಾರ್ಮಿಕ ಅವಿನಾಶ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರು ತಿಳಿಸಿದರು.
ಶಿವಕುಮಾರ್ ಪತ್ನಿ ರಾಧಾ ಅವರನ್ನು ಭೇಟಿ ಸಾಂತ್ವನ ಹೇಳಿದ ಮುಖಂಡರು ನಂತರ ಶಿವಕುಮಾರ್ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ರಾಸಾಯನಿಕ ದ್ರವ ಸಿಡಿತದಿಂದಾಗಿ ಶಿವಕುಮಾರ್ ಕಣ್ಣುಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ. ಅಲ್ಲದೇ, ಯೂರಿನ್ ಕೂಡ ಬ್ಲಾಕ್ ಆಗಿದೆ. ಹೀಗಾಗಿ ತೀವ್ರನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಆತನಿಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಗೆಜ್ಜಲಗೆರೆ ಶಾಹಿ ಗಾರ್ಮೆಂಟ್ಸ್ ಎಕ್ಸ್ ಪೋರ್ಟ್ ಕಂಪನಿಯ ಯೂನಿಟ್ 26ರಲ್ಲಿ ಕಳೆದ ಗುರುವಾರ ಸಿದ್ಧ ಉಡುಪಿನ ಮೇಲಿನ ಕಲೆ ತೆಗೆಯುವ ರಾಸಾಯನಿಕ ದ್ರಾವಣ ಸ್ಫೋಟಿಸಿದ ಪರಿಣಾಮ ಹೆಲ್ಪರ್ ಶಿವಕುಮಾರ್, ಪ್ರಿಂಟಿಂಗ್ ಆಪರೇಟರ್ ಪ್ರಸನ್ನ ವೆಲ್ಡಿಂಗ್ ಕಾರ್ಮಿಕ ಅವಿನಾಶ್ ತೀವ್ರವಾಗಿ ಗಾಯಗೊಂಡಿದ್ದರು.
ಘಟನೆ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ ಮದ್ದೂರು ಕಾರ್ಮಿಕ ಇಲಾಖೆ ನಿರೀಕ್ಷಕಿ ನಾಗರತ್ನ ಹಾಗೂ ಮದ್ದೂರು ಠಾಣೆ ಪಿಎಸ್ಐ ಮಂಜುನಾಥ್ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ತೆರಳಿ ಮಾಹಿತಿ ಕಲೆ ಹಾಕಿದರು. ಈ ಸಂಬಂಧ ಶಿವಕುಮಾರ್ ಸಹೋದರ ಘಟನೆ ಕುರಿತಂತೆ ಹೇಳಿಕೆ ನೀಡಿದ್ದು, ಸೋಮವಾರ ದೂರು ನೀಡಲಿದ್ದಾರೆ ಎಂದು ಕಾರ್ಮಿಕ ಮುಖಂಡರು ತಿಳಿಸಿದರು.
ಕಾನೂನು ಹೋರಾಟಕ್ಕೆ ತೀರ್ಮಾನ:
ಗೆಜ್ಜಲಗೆರೆ ಶಾಹಿ ಗಾರ್ಮೆಂಟ್ಸ್‌ನಲ್ಲಿ ರಾಸಾಯನಿಕ ದ್ರವ ಸ್ಫೋಟದ ಪ್ರಕರಣ ಕುರಿತಂತೆ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷವೇ ಕಾರಣವಾಗಿದೆ. ಈ ಬಗ್ಗೆ ಕಾರ್ಮಿಕ ಸಂಘಟನೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಿದೆ ಎಂದು ಕಾರ್ಮಿಕ ಸಂಘಟನೆಯ ಅಧ್ಯಕ್ಷೆ ವಿ.ಎಸ್.ಶೃತಿ, ಸಂಘಟನಾ ಕಾರ್ಯದರ್ಶಿ ಉಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.