ಮಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಬಂದಾಗ ಬಾಲ್ಯವಿವಾಹ ಪತ್ತೆ..!

KannadaprabhaNewsNetwork |  
Published : Jun 10, 2025, 03:16 AM ISTUpdated : Jun 10, 2025, 04:49 AM IST
ತಪಾಸಣೆಗೆ ಬಂದಾಗ ಬಾಲ್ಯವಿವಾಹ ಪತ್ತೆ | Kannada Prabha

ಸಾರಾಂಶ

ಎಂಟು ತಿಂಗಳ ಗರ್ಭಿಣಿಯೊಬ್ಬಳು ವೈದ್ಯಕೀಯ ತಪಾಸಣೆಗೆ ಹಾಜರಾದ ಸಮಯದಲ್ಲಿ ಆಕೆ ಬಾಲ್ಯ ವಿವಾಹವಾಗಿರುವ ಸಂಗತಿ ನಗರದಲ್ಲಿ ಬೆಳಕಿಗೆ ಬಂದಿದೆ.

  ಮಂಡ್ಯ : ಎಂಟು ತಿಂಗಳ ಗರ್ಭಿಣಿಯೊಬ್ಬಳು ವೈದ್ಯಕೀಯ ತಪಾಸಣೆಗೆ ಹಾಜರಾದ ಸಮಯದಲ್ಲಿ ಆಕೆ ಬಾಲ್ಯ ವಿವಾಹವಾಗಿರುವ ಸಂಗತಿ ನಗರದಲ್ಲಿ ಬೆಳಕಿಗೆ ಬಂದಿದೆ.

ಮೂಲತಃ ಕನಕಪುರ ತಾಲೂಕಿನ ಬಾಲಕಿಯೊಬ್ಬಳು ನಗರದ ಹೊರವಲಯದಲ್ಲಿರುವ ಕೋಣನಹಳ್ಳಿ ತಿಟ್ಟು (ಎಂ.ಜಿ. ಬಡಾವಣೆ) ನಿವಾಸಿ ವ್ಯಕ್ತಿಯನ್ನು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಳು.

ಎಂಟು ತಿಂಗಳ ಗರ್ಭಿಣಿಯಾಗಿದ್ದ ಬಾಲಕಿ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದ ವೇಳೆ ವೈದ್ಯರಿಗೆ ಅನುಮಾನ ಬಂದು ತಾಲೂಕು ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬಾಲಕಿಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಆಕೆ ಇನ್ನೂ ಪ್ರಾಪ್ತ ವಯಸ್ಸಿಗೆ ಬಾರದಿರುವುದು ಕಂಡುಬಂದಿತು. ಆ ಹಿನ್ನೆಲೆಯಲ್ಲಿ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕನಕಪುರ ತಾಲೂಕಿನ ಬಾಲಕಿಗೆ ತಂದೆ-ತಾಯಿ ಇಲ್ಲದ ಕಾರಣ ಚಿಕ್ಕಪ್ಪ-ಚಿಕ್ಕಮ್ಮನ ಆಶ್ರಯದಲ್ಲಿದ್ದಳು. ಕೋಣನಹಳ್ಳಿ ತಿಟ್ಟು ನಿವಾಸಿ ವ್ಯಕ್ತಿ ವ್ಯಾಪಾರಕ್ಕೆಂದು ಕನಕಪುರಕ್ಕೆ ತೆರಳಿದ್ದ ಸಮಯದಲ್ಲಿ ಬಾಲಕಿಯ ಪರಿಚಯವಾಗಿದೆ. ನಂತರದಲ್ಲಿ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಒಂದು ವರ್ಷ ಕಾಲ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೆ ತಿಳಿದು ಎರಡೂ ಕುಟುಂಬದವರು ಒಪ್ಪಿ ಕನಕಪುರ ತಾಲೂಕಿನ ಸಮೀಪದ ಶ್ರೀಆಂಜನೇಯಸ್ವಾಮಿ ದೇಗುಲದಲ್ಲಿ ಮದುವೆಯಾಗಿದ್ದರು. ನಂತರ ಕೋಣನಹಳ್ಳಿ ತಿಟ್ಟಿಗೆ ಬಂದ ದಂಪತಿ ಸಂಸಾರ ನಡೆಸುತ್ತಿದ್ದರು.

ಇದೀಗ ಎಂಟು ತಿಂಗಳ ಗರ್ಭಿಣಿಯಾಗಿದ್ದ ಬಾಲಕಿಯನ್ನು ಮಿಮ್ಸ್ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದಾಗ ಆಕೆ ಪ್ರಾಪ್ತ ವಯಸ್ಕಳಾಗಿಲ್ಲದಿರುವ ಬಗ್ಗೆ ವೈದ್ಯರಿಗೆ ಅನುಮಾನ ಬಂದಿದೆ. ಕೂಡಲೇ ವಿಷಯವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಜವರೇಗೌಡ ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಡಾ.ಜವರೇಗೌಡ ಅವರು ಬಾಲಕಿಯನ್ನು ವಿಚಾರಿಸಿದಾಗ ಆಕೆ ತಾಯಿ ಕಾರ್ಡ್ ಪಡೆದಿಲ್ಲದಿರುವುದು ಗೊತ್ತಾಯಿತು. ನಂತರ ಆಕೆಯ ಆದಾರ್ ಕಾರ್ಡ್ ಕೂಡ ಹಾಜರುಪಡಿಸಲಿಲ್ಲ. ತರುವಾಯ ಆಕೆಯ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿದಾಗ ಟಿ.ಸಿ.ಯಲ್ಲಿ ಆಕೆಯ ಹುಟ್ಟಿದ ವರ್ಷ 2009 ಎಂದು ನಮೂದಿಸಲಾಗಿತ್ತು. ಇದರಿಂದ ಆಕೆಗೆ  16 ವರ್ಷ ವಯಸ್ಸಿನವಳೆಂದು ತಿಳಿದುಬಂತು.

ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡ ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಅವರು ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಗರ್ಭಿಣಿಯಾಗಿರುವ ಬಾಲಕಿಯನ್ನು ನೆಹರು ನಗರದಲ್ಲಿರುವ ಸಖಿ ಕೇಂದ್ರದಲ್ಲಿ ಆಶ್ರಯ ದೊರಕಿಸಿ ಪಾಲನೆ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಠಾಣೆ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Read more Articles on

Recommended Stories

ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ
ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ