ಅಲ್ಪಸಂಖ್ಯಾತರ ತುಷ್ಟೀಕರಣದ ಮನಸ್ಥಿತಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣ ಮುಚ್ಚಿಹಾಕಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬ್ಯಾಡಗಿ(ಹಾವೇರಿ)
ಅಲ್ಪಸಂಖ್ಯಾತರ ತುಷ್ಟೀಕರಣದ ಮನಸ್ಥಿತಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣ ಮುಚ್ಚಿಹಾಕಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ತಾಲೂಕಿನ ಚಿಕ್ಕಬಾಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಪೊಲೀಸ್ ಆಡಳಿತ ಸಂಪೂರ್ಣ ವಿಫಲವಾಗಿದೆ. ಇದರಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ ಎಂದರು.
ಹಾನಗಲ್‌ನಲ್ಲಿ ಇತ್ತೀಚೆಗೆ ಮೆರವಣಿಗೆಗಳನ್ನು ಸ್ಥಗಿತಗೊಳಿಸಿದ್ದು, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ (ರಾಮಭಕ್ತನ) ವಿರುದ್ಧ ಪೊಲೀಸ್ ದೌರ್ಜನ್ಯ ಹಾಗೂ ಇದೀಗ ನಡೆದಿರುವ ಗ್ಯಾಂಗ್‌ರೇಪ್ ಪ್ರಕರಣಗಳೆಲ್ಲ ಅಲ್ಪಸಂಖ್ಯಾತರ ತುಷ್ಟೀಕರಣದ ಮುಂದುವರಿದ ಭಾಗ ಎಂದರು.
ಘಟನೆ ನಡೆದು ನಾಲ್ಕೈದು ದಿನಗಳಾದರೂ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ಆಗಿಲ್ಲ. ವಿಡಿಯೋ ಹೊರಬಂದ ಬಳಿಕವಷ್ಟೇ ಎಫ್‌ಐಆರ್ ಆಗಿದೆ. ಒಂದು ಸಮುದಾಯದ ಯುವಕರಿಗೆ ಅವರು ಏನು ಮಾಡಿದರೂ ರಕ್ಷಣೆ ಸಿಗಲಿದೆ ಎಂಬ ಮೌಖಿಕ ಸಂದೇಶ ರವಾನೆಯಾಗುತ್ತಿವೆ. ನಾಳೆ ಇನ್ನು ಏನೇನು ನಡೆಯುತ್ತವೆಯೋ ಎಂಬುದನ್ನು ಊಹಿಸಲೂ ಆಗುತ್ತಿಲ್ಲ ಎಂದರು.
ಹಾವೇರಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ವೈಫಲ್ಯ ಎದ್ದು ಕಾಣುತ್ತಿದೆ. ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಸಂಬಂಧಿಸಿದ ಠಾಣೆಯ ಇನ್‌ಸ್ಪೆಕ್ಟರ್‌ರನ್ನು ಅಮಾನತುಗೊಳಿಸುವ ಮೂಲಕ ನೈತಿಕ ಪೊಲೀಸ್‌ಗಿರಿ ನೆಪದಲ್ಲಿ ಆಗುತ್ತಿರುವ ಅನಾಹುತಗಳಿಗೆ ರಾಜ್ಯ ಸರ್ಕಾರ ಉತ್ತರಿಸಬೇಕಾಗಿದೆ ಎಂದರು.
ಸಂತ್ರಸ್ತೆ ಭೇಟಿ ಮಾಡದಿರಲೆಂದು ಶಿಫ್ಟ್-ಬೊಮ್ಮಾಯಿ: ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕುವ ಪೊಲೀಸರ ಪ್ರಯತ್ನ ವಿಫಲವಾಗಿದೆ.
ಬಿಜೆಪಿ ಮಹಿಳಾ ನಿಯೋಗ ಹಾಗೂ ಬಿಜೆಪಿ ಮುಖಂಡರು ಸಂತ್ರಸ್ತೆಯನ್ನು ಭೇಟಿಯಾಗುತ್ತಾರೆ ಎಂದು ತಿಳಿದು ಪೊಲೀಸರು ವಿಚಾರಣೆ ನೆಪದಲ್ಲಿ ಆಕೆಯನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. ಇಂಥವರಿಂದ ಸಂತ್ರಸ್ತೆಗೆ ನ್ಯಾಯ ಸಿಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಕೂಡಲೇ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ಪ್ರಕರಣದ ತನಿಖೆ ವಹಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.
ಸಂತ್ರಸ್ತೆಗೆ ದುಡ್ಡಿನ ಆಮಿಷವೊಡ್ಡಿ ಪ್ರಕರಣ ವಾಪಸ್ ಪಡೆಯಲು ಹೇಳಿರುವುದು ಬಹಿರಂಗಗೊಂಡಿದೆ. ಇದನ್ನು ನೋಡಿದರೆ ಸ್ಥಳೀಯ ಪೊಲೀಸರು ಈ ಪ್ರಕರಣ ಮುಚ್ಚಿಹಾಕಲು ನೋಡುತ್ತಿದ್ದಾರೆ. ಸೋಮವಾರ ಮುಖ್ಯಮಂತ್ರಿ ಹಾವೇರಿಗೆ ಬರುತ್ತಿದ್ದು, ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸುವಂತೆ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ನನಗಿದೆ ಎಂದರು.