‘ಕೆಫೆ ಬಾಂಬ್‌’ ತಿರುಚಲು ಯತ್ನಿಸಿದ್ದ ಕಾಂಗ್ರೆಸ್‌: ಅಶೋಕ್‌

KannadaprabhaNewsNetwork |  
Published : Apr 14, 2024, 01:50 AM ISTUpdated : Apr 14, 2024, 05:59 AM IST
R Ashok

ಸಾರಾಂಶ

ಬೆಂಗಳೂರಿನ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ಕಾಂಗ್ರೆಸ್‌ ನಾಯಕರು ಹಾಗೂ ಸಚಿವರು ತಿರುಚಲು ಯತ್ನಿಸಿದ್ದರು. ಆದರೆ, ಎನ್‌ಐಎ ತಂಡ ಸೂಕ್ತ ತನಿಖೆ ನಡೆಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

  ಬೆಂಗಳೂರು :  ಬೆಂಗಳೂರಿನ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ಕಾಂಗ್ರೆಸ್‌ ನಾಯಕರು ಹಾಗೂ ಸಚಿವರು ತಿರುಚಲು ಯತ್ನಿಸಿದ್ದರು. ಆದರೆ, ಎನ್‌ಐಎ ತಂಡ ಸೂಕ್ತ ತನಿಖೆ ನಡೆಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಯಿಂದ ರಾಜ್ಯದ ಜನರು ಆತಂಕಗೊಂಡಿದ್ದರು. ಆದರೆ ಸೂಕ್ತ ಸಮಯದಲ್ಲೇ ಉಗ್ರರನ್ನು ಬಂಧಿಸಿ ಮುಂದಿನ ಅನಾಹುತಗಳನ್ನು ಎನ್‌ಐಎ ತಪ್ಪಿಸಿದೆ. ಇದಕ್ಕಾಗಿ ಎನ್‌ಐಎ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು.

ಕಾಂಗ್ರೆಸ್‌ ನಾಯಕರು ಈ ಘಟನೆಯನ್ನು ತಿರುಚುವ ಕೆಲಸ ಮಾಡಿದ್ದರು. ಅಲ್ಪಸಂಖ್ಯಾತರಿಗೆ ನೋವಾದರೆ ಮತಬ್ಯಾಂಕ್‌ ತಪ್ಪುತ್ತದೆ ಎಂಬ ಕಾರಣಕ್ಕೆ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಇದು ವೈಯಕ್ತಿಕ, ವ್ಯಾಪಾರ ಸಂಬಂಧಿ ದ್ವೇಷ ಎನ್ನುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಅದರಂತೆ ಪೊಲೀಸರು ಕೂಡ ನಡೆದುಕೊಂಡರು. ಹಿಂದೆ ಕುಕ್ಕರ್‌ ಸ್ಪೋಟ ಆದಾಗಲೂ ಮಧ್ಯಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್‌, ನನ್ನ ಬ್ರದರ್‌ ಎಂದಿದ್ದರು. ರಾಜ್ಯ ಸರ್ಕಾರ ಈ ರೀತಿ ನಿರ್ದೇಶನ ನೀಡಿದ್ದರಿಂದ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಆದರೆ ಎನ್‌ಐಎ ಬಂದ ಬಳಿಕ ಭಯೋತ್ಪಾದಕ ಚಟುವಟಿಕೆ ಬಯಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ಸಹೋದರಿ ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲೇ ಭಯೋತ್ಪಾದಕರು ಸಿಕ್ಕಿದ್ದಾರೆ. ಇಲ್ಲಿ ಬ್ರದರ್‌ಗಳಿದ್ದರೆ, ಅಲ್ಲಿ ಸಿಸ್ಟರ್‌ ಬಳಿಯೇ ಉಗ್ರರು ಸಿಕ್ಕಿದ್ದಾರೆ. ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ ಸುರಕ್ಷಿತ ಸ್ಥಳವಾಗಿದೆ. ಎನ್‌ಐಎ ತಂಡ ಸಾಯಿ ಪ್ರಸಾದ್‌ ಎಂಬುವವರನ್ನು ತನಿಖೆಗೆ ಕರೆದರೆ ಸಚಿವ ದಿನೇಶ್‌ ಗುಂಡೂರಾವ್‌ ಅದನ್ನೇ ಹಿಡಿದುಕೊಂಡು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಸಾಯಿ ಪ್ರಸಾದ್‌ ಸಾಕ್ಷಿಯಾಗಿ ಹೋಗಿದ್ದು, ಅವರ ವಿವರವನ್ನು ಎಲ್ಲರ ಮುಂದೆ ಕಾಂಗ್ರೆಸ್‌ನವರು ಬಹಿರಂಗ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಕೂಗಿದ ದೇಶದ್ರೋಹಿ ಘಟನೆಯನ್ನು ಸಚಿವ ಪ್ರಿಯಾಂಕ್‌ ಖರ್ಗೆ ತಿರುಚಲು ಯತ್ನಿಸಿದ್ದರು. ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಕೂಡ ಭಯೋತ್ಪಾದಕ ಘಟನೆಯಂತೆಯೇ ಇತ್ತು. ಸಂಪತ್‌ ರಾಜ್‌ ಜೈಲಿಗೆ ಹೋಗಿ ಬಂದರೂ ಮಂಡಳಿಯ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಆದರೆ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!