ಅನಿವಾಸಿ ಭಾರತೀಯರು ಮಗು ದತ್ತು ಪಡೆಯಲು ತಾವು ನೆಲೆಸಿರುವ ದೇಶದ ಒಪ್ಪಿಗೆ ಪತ್ರ ಕಡ್ಡಾಯ: ಹೈಕೋರ್ಟ್‌

KannadaprabhaNewsNetwork |  
Published : Jan 26, 2024, 01:46 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಅನಿವಾಸಿ ಭಾರತೀಯರು ಮಗು ದತ್ತು ಪಡೆಯಲು ತಾವು ನೆಲೆಸಿರುವ ದೇಶದ ಒಪ್ಪಿಗೆ ಪತ್ರ ಕಡ್ಡಾಯ: ಹೈಕೋರ್ಟ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ದಂಪತಿ ಭಾರತದಲ್ಲಿರುವ ಮಗುವನ್ನು ದತ್ತು ಪಡೆಯಲು ‘ಹೇಗ್’ ಒಪ್ಪಂದದಂತೆ (ಅಂತರ್‌ ದೇಶೀಯ) ತಾವು ನೆಲೆಸುವ ದೇಶದಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಚಿಕ್ಕಬಳ್ಳಾಪುರದ ರಶ್ಮಿ ಎಂಬುವವರಿಂದ ಐದು ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆದ ಸಂಬಂಧ ತಮಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡದ ಮಕ್ಕಳ ರಕ್ಷಣಾ ಘಟಕ ಕ್ರಮ ಆಕ್ಷೇಪಿಸಿ ಜರ್ಮನಿ ಫ್ರಾಂಕ್ಪರ್ಟ್‌ ಪ್ರದೇಶದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯು.ಅಜಯಕುಮಾರ್‌ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಸ್ಪಷ್ಟನೆ ನೀಡಿದೆ.

ಜೊತೆಗೆ, ಭಾರತದ ಮಗುವನ್ನು ದತ್ತು ಪಡೆಯಲು ಹೇಗ್ ಒಪ್ಪಂದದ ಪ್ರಕಾರ ಅಂತಾರಾಷ್ಟ್ರೀಯ ದತ್ತು ಸ್ವೀಕಾರ ನಿಯಮಗಳ ಕಾರ್ಯವಿಧಾನಗಳಿಗೆ ಅನುಗುಣವಾಗಿ ತಾವು ನೆಲೆಸುವ ದೇಶದಿಂದ ದೃಢೀಕರಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿ ಮುಂದಿನ ಕ್ರಮ ಜರುಗಿಸಲು ಅರ್ಜಿದಾರ ದಂಪತಿ ಸ್ವತಂತ್ರವಾಗಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.ಪ್ರಕರಣದ ವಿವರ

ಬೆಂಗಳೂರು ಮೂಲದ ಯು.ಅಜಯ್ ಕುಮಾರ್ ಮತ್ತು ಅವರ ಪತ್ನಿ ಟಿ.ವಿ.ಮೈತ್ರಾ ದಂಪತಿ ಚಿಕ್ಕಬಳ್ಳಾಪುರದ ರಶ್ಮಿ ಎಂಬವರಿಂದ ಐದು ತಿಂಗಳ ಹೆಣ್ಣು ಮಗು ದತ್ತು ಪಡೆದಿದ್ದರು. ಚಿಕ್ಕಬಳ್ಳಾಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2023ರ ಮಾ.29ರಂದು ದತ್ತು ಸ್ವೀಕಾರವನ್ನು ನೋಂದಾಯಿಸಿದ್ದರು. ನಂತರ ಮಗು ದತ್ತು ಪಡೆದಿರುವ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ದಂಪತಿ ಹಲವು ಬಾರಿ ಸಲ್ಲಿಸಿದ್ದ ಮನವಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದರಿಂದ ದಂಪತಿ ಹೈಕೋರ್ಟ್ ಮೆಟ್ಟಿಲೇರಿ, ನಿರಾಕ್ಷೇಣಾ ಪತ್ರ ನೀಡಲು ಆದೇಶಿಸುವಂತೆ ಕೋರಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ವಿದೇಶದಲ್ಲಿ ನೆಲೆಸಿರುವ ದಂಪತಿ ಭಾರತದ ಮಗುವನ್ನು ದತ್ತು ಪಡೆಯಬೇಕಾದರೆ ಹೇಗ್ ಸಮಾವೇಶದ ಒಪ್ಪಂದ 17ನೇ ಪರಿಚ್ಛೇದದ ಪ್ರಕಾರ, ದಂಪತಿ ದತ್ತು ಸ್ವೀಕರಿಸಿದ ಮಗುವಿನೊಂದಿಗೆ ಆ ದೇಶಕ್ಕೆ(ಜರ್ಮನಿ) ಪ್ರಯಾಣಿಸಲು ಹಾಗೂ ಶಾಶ್ವತವಾಗಿ ಅಲ್ಲಿ ನೆಲೆಸಲು ಹಕ್ಕು ಪಡೆಯಬೇಕಾಗುತ್ತದೆ. ಅದರಂತೆ ದತ್ತು ಸ್ವೀಕಾರ ಪ್ರಕ್ರಿಯೆಗೆ ಭಾರತ ಮತ್ತು ಜರ್ಮನಿ ದೇಶಗಳ ಅಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯ. ಹಾಗಾಗಿ, ಅರ್ಜಿದಾರರು ಜರ್ಮನಿ ದೇಶದ ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಬೇಕು. ಅವರ ಮೂಲಕ ಭಾರತದಲ್ಲಿನ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಸಂವಹನ ನಡೆಸಬೇಕು. ಅದಾದ 10 ದಿನಗಳಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದುಕೊಳ್ಳಬಹುದಾಗಿದೆ.

ಆದರೆ, ಸದರಿ ಪ್ರಕರಣದಲ್ಲಿ ಅರ್ಜಿದಾರರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಪರಿಣಾಮ ನಿರಾಕ್ಷೇಪಣಾ ಪತ್ರ ಲಭ್ಯವಾಗಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕವು ಎನ್‌ಒಸಿ ಲಭ್ಯವಾಗದಿದ್ದಲ್ಲಿ ಸೂಕ್ತ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ಪೀಠ ಹೇಳಿತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು
ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!