ಬೆಂಗಳೂರು : ಬೆಳ್ತಂಗಡಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಏ.6ರಂದು ಧರ್ಮಸ್ಥಳದಲ್ಲಿ ವಿವಿಧ ಸಂಘಟನೆಗಳು ನಡೆಸಲು ಉದ್ದೇಶಿಸಿದ್ದ ಪ್ರತಿತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಉದ್ದೇಶಿತ ಪ್ರತಿಭಟನೆ ನಡೆಸಲು ತಡೆಯಾಜ್ಞೆ ನೀಡಬೇಕು ಎಂದು ಕೋರಿ ಧನಕೀರ್ತಿ ಆರಿಗ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿ ಕುರಿತ ಮುಂದಿನ ವಿಚಾರಣೆಯವರೆಗೆ ಪ್ರತಿಭಟನೆ ನಡೆಸಬಾರದು ಎಂದು ಸೂಚಿಸಿದೆ.
ಬೆಳ್ತಂಗಡಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ವಿಚಾರಣಾ ನ್ಯಾಯಾಲಯ ಘೋಷಿಸಿತ್ತು. ಆದರೆ ಈ ಕೊಲೆಗೆ ಕಾರಣವೇನು? ನಿಜವಾದ ಕೊಲೆಗಾರರು ಯಾರು ಎಂಬುದನ್ನು ಪತ್ತೆ ಹಚ್ಚಲು ಸರ್ಕಾರವನ್ನು ಆಗ್ರಹಿಸಿ ವಿವಿಧ ಸಂಘಟನೆಗಳು ಏ.6ರಂದು ಬೆಂಗಳೂರು ಹಾಗೂ ಧರ್ಮಸ್ಥಳದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದವು.
ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡದ ಪೊಲೀಸ್ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಕೆಲ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಶಾಂತಿಯುತವಾಗಿ ಸಭೆ ನಡೆಸಿ ಚರ್ಚಿಸಬಹುದು ಎಂದು ಹೈಕೋರ್ಟ್ ಈ ಹಿಂದೆ ಮಧ್ಯಂತರ ಆದೇಶ ಮಾಡಿತ್ತು. ಆದರೆ, ಈ ಮಧ್ಯೆ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಏ.6ರಂದು ಧರ್ಮಸ್ಥಳದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪ್ರತಿಭಟನೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದರು.
ಈ ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್, ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಕೆಲವೊಂದು ವಾಟ್ಸ್ ಆ್ಯಪ್ ಸಂದೇಶಗಳನ್ನು ಲಗತ್ತಿಸಿದ್ದಾರೆ. ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗುವ ಹಾಗೂ ದೊಡ್ಡ ಸಂಖ್ಯೆಯಲ್ಲಿ ಜನರು ಬಂದರೆ, ಅವರು ಧರ್ಮಸ್ಥಳ ದೇವಸ್ಥಾನಕ್ಕೆ ನುಗ್ಗುತ್ತಾರೆ ಎಂಬುದಾಗಿ ಸಂದೇಶಗಳು ಸೂಚಿಸುತ್ತವೆ.
ಇದು ಈ ಹಿಂದೆ ಸಲ್ಲಿಸಲಾದ ಅರ್ಜಿಯ ಉದ್ದೇಶ ಆಗಿರಲಿಲ್ಲ ಹಾಗೂ ಹೈಕೋರ್ಟ್ ಈ ಹಿಂದೆ ನೀಡಿದ್ದ ಅನುಮತಿಯ ಹಿಂದಿನ ಉದ್ದೇಶವೂ ಆಗಿರಲಿಲ್ಲ. ಅಲ್ಲದೆ, ಇದೇ ವಿಚಾರವಾಗಿ ಹೈಕೋರ್ಟ್ ಈ ಹಿಂದೆ ಹೊರಡಿಸಿದ ಆದೇಶವನ್ನು ತಪ್ಪಿತಸ್ಥರು ಉಲ್ಲಂಘಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟು, ಏ.6ರಂದು ಧರ್ಮಸ್ಥಳದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪ್ರತಿಭಟನೆಗೆ ತಡೆಯಾಜ್ಞೆ ನೀಡಿದೆ.