ಮಂಡ್ಯ: ಮಂಡ್ಯ ಉಪ ಕಾರಾಗೃಹದಲ್ಲಿ ಗಾಂಜಾ ಹಾಗೂ ಮೊಬೈಲ್ ಸಿಕ್ಕಿದ್ದು, ಅಪರಿಚಿತ ದುಷ್ಕರ್ಮಿಗಳು ಜೈಲಿನ ಹೊರ ಭಾಗದಿಂದ ಒಳಾವರಣಕ್ಕೆ ಎಸೆದು ಹೋಗಿದ್ದಾರೆ ಎಂದು ಜೈಲು ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಚಾಮುಂಡೇಶ್ವರಿನಗರ ಬಡಾವಣೆಯ ಉಪ ಕಾರಾಗೃಹದಲ್ಲಿ ಶನಿವಾರ ಬೆಳಗ್ಗೆ 8.40 ರಿಂದ 9ರ ಸಮಯದಲ್ಲಿ ಅಪರಿಚಿತ ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಬಂದು ಕಾರಾಗೃಹದ ಮುಖ್ಯಗೋಡೆ ಒಳ ಭಾಗಕ್ಕೆ ವಸ್ತುವನ್ನು ಎಸೆದು ಹೋಗಿದ್ದಾರೆ.
ಜೈಲಿನ ಒಳಾವರಣಕ್ಕೆ ವಸ್ತು ಬಂದು ಬಿದ್ದಿದ್ದನ್ನು ಸಿಸಿ ಟಿಸಿ ದೃಶ್ಯಾವಳಿಗಳಲ್ಲಿ ಪರಿಶೀಲನೆ ನಡೆಸಿದಾಗ ಆ ವಸ್ತುವನ್ನು ಸೆಲ್ ನಂ. 4ರಲ್ಲಿರುವ ನಾಗ ಅಲಿಯಾಸ್ ಹಂದಿ ನಾಗ ಎಂಬಾತ ಬಂದು ತೆಗೆದುಕೊಂಡು ಹೋಗುತ್ತಿರುವುದು ಸಿಸಿ ಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.
ತಕ್ಷಣ ಕಾರ್‍ಯಪ್ರ ವೃತ್ತರಾದ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿ ನಾಗ ಅಲಿಯಾಸ್ ಹಂದಿ ನಾಗ ಇರುವ ಸೆಲ್ ನಂ.4ಕ್ಕೆ ಹೋಗಿ ತಪಾಸಣೆ ಮಾಡಿದಾಗ ಕಪ್ಪು ಟೇಪಿನಿಂದ ಸುತ್ತಿದ ಬಾಲ್ ದೊರೆತಿದೆ. ಅದನ್ನು ತೆರೆದು ಪರಿಶೀಲಿಸಲಾಗಿ ಅದರಲ್ಲಿ ಕಪ್ಪು ಬಣ್ಣದ ಒಂದು ಮೊಬೈಲ್ ಮತ್ತು ಗಾಂಜಾ ರೀತಿಯ ವಸ್ತು ಸುಮಾರು 10 ಗ್ರಾಂ ಸಿಕ್ಕಿದೆ ಎಂದು ಜೈಲು ಅಧಿಕಾರಿ ಪರಮಾನಂದ ಹರವಾಳ ಅವರು ಪಶ್ಚಿಮ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದು, ಜೈಲಿನ ಒಳ ಭಾಗಕ್ಕೆ ಬಾಲ್ ರೀತಿಯಲ್ಲಿ ಸುತ್ತಿದ ಗಾಂಜಾ ಮತ್ತು ಮೊಬೈಲ್‌ನ್ನು ಯಾರು ತಲುಪಿಸಿದ್ದರು ಎಂಬದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಮಳವಳ್ಳಿ: ತಾಲೂಕಿನ ನೆಲಮಾಕನಹಳ್ಳಿ ಹೊರವಲಯದಲ್ಲಿ ಜೂಜಾಟದಲ್ಲಿ ತೊಡಗಿದ ಗುಂಪಿನ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ. ಗ್ರಾಮದ ಪಿಕಳಿ ಮಲ್ಲೇಶ್ ಅವರ ಜಮೀನಿನ ಸಮೀಪ ರಸ್ತೆಯ ಬದಿ ಶುಕ್ರವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಗ್ರಾಮಾಂತರ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿ 32140 ರು. ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.