ಆನ್‌ಲೈನ್ ಜಾಬ್ ಹೆಸರಿನಲ್ಲಿ ಟಾಸ್ಕ್‌ಗಳನ್ನು ನೀಡಿ ಲಾಭ : ದೇಶಾದ್ಯಂತ 6 ಕೋಟಿ ರು. ಸೈಬರ್‌ ವಂಚನೆ : ಸೆರೆ

KannadaprabhaNewsNetwork |  
Published : Sep 28, 2024, 01:22 AM ISTUpdated : Sep 28, 2024, 04:29 AM IST
cyber crime

ಸಾರಾಂಶ

ಆನ್‌ಲೈನ್ ಜಾಬ್ ಹೆಸರಿನಲ್ಲಿ ಟಾಸ್ಕ್‌ಗಳನ್ನು ನೀಡಿ ಅಧಿಕ ಲಾಭದ ಆಸೆ ತೋರಿಸಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಸುಮಾರು ₹6 ಕೋಟಿ ವಂಚಿಸಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಆನ್‌ಲೈನ್ ಜಾಬ್ ಹೆಸರಿನಲ್ಲಿ ಟಾಸ್ಕ್‌ಗಳನ್ನು ನೀಡಿ ಅಧಿಕ ಲಾಭದ ಆಸೆ ತೋರಿಸಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಸುಮಾರು ₹6 ಕೋಟಿ ವಂಚಿಸಿದ್ದ 10 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೈಯದ್‌ ಯಹ್ಯಾ(32), ಉಮರ್‌ ಫಾರೂಕ್‌(34), ಮೊಹಮ್ಮದ್‌ ಮಹೀನ್‌(32), ಮೊಹಮ್ಮದ್‌ ಮುಜಾಮಿಲ್‌(35), ತೇಜೇಶ್‌(35), ಚೇತನ್‌(35), ವಾಶೀಮ್‌(30), ಸೈಯದ್‌ ಜೈದ್(24), ಸಾಹಿಲ್‌ ಅಬ್ದುಲ್‌ ಅನಾನ್‌(30) ಹಾಗೂ ಓಂ ಪ್ರಕಾಶ್(30) ಬಂಧಿತರು. ಆರೋಪಿಗಳಿಂದ ₹1.74 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 72 ಮೊಬೈಲ್‌ಗಳು, 182 ಡೆಬಿಟ್‌ ಕಾರ್ಡ್‌ಗಳು, 2 ಲ್ಯಾಪ್‌ಟಾಪ್‌ಗಳು, 133 ಸಿಮ್‌ ಕಾರ್ಡ್‌ಗಳು, 127 ಬ್ಯಾಂಕ್‌ ಪಾಸ್‌ಬುಕ್‌ಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಎಲ್ಲಾ ಆರೋಪಿಗಳು ಬೆಂಗಳೂರು ನಿವಾಸಿಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್‌ ಹೆಸರಿನಲ್ಲಿ ₹25.37 ಲಕ್ಷ ವಂಚನೆ:

ಕಳೆದ ಜೂನ್‌ನಲ್ಲಿ ಟಿ.ದಾಸರಹಳ್ಳಿ ನಿವಾಸಿ ರಮೇಶ್‌(ಹೆಸರು ಬದಲಿಸಲಾಗಿದೆ) ಮೊಬೈಲ್‌ನ ವಾಟ್ಸಾಪ್‌ಗೆ ಅಪರಿಚಿತನಿಂದ ಆನ್‌ಲೈನ್‌ ಜಾಬ್‌ ಕುರಿತ ಮೆಸೇಜ್‌ ಬಂದಿದೆ. ನಂತರ ರಮೇಶ್‌ಗೆ ಕೆಲವು ಲಿಂಕ್‌ಗಳನ್ನು ಕಳುಹಿಸಿದ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದ್ದಾನೆ. ನಂತರ ಕೆಲವು ಟಾಸ್ಕ್ ನೀಡಿ ಐಷಾರಾಮಿ ಹೋಟೆಲ್‌ಗಳ ರಿವ್ಯೂ ಮಾಡುವಂತೆ ಸೂಚಿಸಿದ್ದಾನೆ. ಈತನ ಸೂಚನೆ ಮೇರೆಗೆ ರಮೇಶ್‌, ₹150 ವರ್ಗಾಯಿಸಿದ್ದಾರೆ. ರಿವ್ಯೂ ಬಳಿಕ ರಮೇಶ್‌ಗೆ ಖಾತೆಗೆ ₹500 ವರ್ಗಾಯಿಸಿದ್ದಾನೆ. ಇದೇ ರೀತಿ ಹಲವು ರಿವ್ಯೂ ಮಾಡಿಸಿ ಹೆಚ್ಚಿನ ಹಣ ಸಂದಾಯ ಮಾಡಿದ್ದಾನೆ. ಇದರಿಂದ ರಮೇಶ್‌ಗೆ ಈ ಆನ್‌ಲೈನ್‌ ಜಾಬ್‌ ಬಗ್ಗೆ ನಂಬಿಕೆ ಬಂದಿದೆ.

ಮುಂದುವರೆದು, ಅಪರಿಚಿತ ವ್ಯಕ್ತಿಯು ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್‌ನಲ್ಲಿ ಇನ್ವೆಸ್ಟ್‌ಮೆಂಟ್‌ ಮಾಡಿದರೆ, ಹೆಚ್ಚಿನ ಲಾಭ ಬರಲಿದೆ ಎಂದು ರಮೇಶ್‌ಗೆ ನಂಬಿಸಿದ್ದಾನೆ. ಜೂ.20ರಿಂದ ಜು.1ರ ನಡುವೆ ವಿವಿಧ ಹಂತಗಳಲ್ಲಿ ರಮೇಶ್‌ ಅಪರಿಚಿತ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ₹25.37 ಲಕ್ಷ ವರ್ಗಾಯಿಸಿದ್ದಾರೆ. ಬಳಿಕ ಅಪರಿಚಿತ ಯಾವುದೇ ಲಾಭಾಂಶ ನೀಡದೆ ವಂಚಿಸಿದ್ದಾನೆ. ಈ ಸಂಬಂಧ ರಮೇಶ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್‌ ಖಾತೆಗಳ ಮಾಹಿತಿ ನೀಡಿದ ಸುಳಿವು

ಪೊಲೀಸರ ತನಿಖೆ ವೇಳೆ ರಮೇಶ್‌ ಖಾತೆಯಿಂದ ಬೆಂಗಳೂರಿನ ವ್ಯಕ್ತಿಗಳ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಈ ಬ್ಯಾಂಕ್‌ ಖಾತೆಗಳ ಮಾಹಿತಿ ಆಧರಿಸಿ ಆರ್‌.ಟಿ.ನಗರದ ಕಾಫಿ ಡೇ ಎದುರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳಿಂದ ಲ್ಯಾಪ್‌ಟಾಪ್‌, 23 ಮೊಬೈಲ್‌ಗಳು, ₹1.24 ಲಕ್ಷ ನಗದು, 99 ಡೆಬಿಟ್‌ ಕಾರ್ಡ್‌ಗಳು, 50 ಪಾಸ್‌ ಬುಕ್‌ಗಳು, 41 ಸಿಮ್‌ ಕಾರ್ಡ್‌ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಸೈಬರ್‌ ವಂಚನೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಮೂವರ ಬಂಧನ:

ವಿಚಾರಣೆ ವೇಳೆ ಪ್ರಕರಣದ ಪ್ರಮುಖ ಆರೋಪಿಗಳಾದ ಸೈಯದ್ ಯಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್ ಹೆಸರು ಬಾಯ್ಬಿಟ್ಟಿದ್ದಾರೆ. ಈ ಮೂವರು ಸೈಬರ್‌ ವಂಚಕರ ಭೇಟಿಗೆ ಚೀನಾ ದೇಶಕ್ಕೆ ತೆರಳಿರುವುದಾಗಿ ಹೇಳಿದ್ದಾರೆ. ಈ ಮಾಹಿತಿ ಮೇರೆಗೆ ಸೈಬರ್‌ ಪೊಲೀಸರು ಈ ಮೂವರ ಪತ್ತೆಗೆ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿದ್ದರು. ಸೆ.15ರಂದು ಈ ಮೂವರು ಆರೋಪಿಗಳು ಚೀನಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದು ಸೈಬರ್‌ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಆರೋಪಿಗಳ ವಿಚಾರಣೆ ನಡೆಸಿ ನಗರದ ವಿವಿಧೆಡೆ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗಳು, ಡೆಬಿಟ್‌ ಕಾರ್ಡ್‌ಗಳು, ಪಾಸ್‌ ಪುಸ್ತಕಗಳು, ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

21 ರಾಜ್ಯಗಳಲ್ಲಿ 122 ಪ್ರಕರಣ ಪತ್ತೆ:

ಆರೋಪಿಗಳು ಈ ಆನ್‌ಲೈನ್‌ ಜಾಬ್‌ ಹೆಸರಿನಲ್ಲಿ ಕರ್ನಾಟಕ ಸೇರಿದಂತೆ ದೇಶದ 21 ರಾಜ್ಯಗಳಲ್ಲಿ ಸುಮಾರು ₹6 ಕೋಟಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನ್ಯಾಷನಲ್‌ ಸೈಬರ್‌ ಕ್ರೈಂ ಪೋರ್ಟಲ್‌(ಎನ್‌ಸಿಆರ್‌ಪಿ)ನಲ್ಲಿ 122 ಪ್ರಕರಣಗಳು ದಾಖಲಾಗಿವೆ. ಅಸ್ಸಾಂ, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ತಲಾ 1, ಒಡಿಶಾ, ಕೇರಳ ತಲಾ 2, ಚತ್ತೀಸ್‌ಗಢ, ದೆಹಲಿ, ಪಶ್ಚಿಮ ಬಂಗಾಳ, ಉತ್ತರಖಂಡ ತಲಾ 3, ಪಂಜಾಬ್‌ 4, ರಾಜಸ್ಥಾನ 5, ಬಿಹಾರ 6, ಗುಜರಾತ್‌ 7, ಕರ್ನಾಟಕ 9, ಆಂಧ್ರಪ್ರದೇಶ 10, ತೆಲಂಗಾಣ, ಮಹಾರಾಷ್ಟ್ರ ತಲಾ 12, ಉತ್ತರಪ್ರದೇಶ 16, ತಮಿಳುನಾಡು 20 ಪ್ರಕರಣಗಳು ಪತ್ತೆಯಾಗಿವೆ.

ಚೀನಾ ಸೈಬರ್‌ ವಂಚಕರ ಸಂಪರ್ಕ:

ಈ ವ್ಯವಸ್ಥಿತ ಸೈಬರ್‌ ವಂಚನೆ ಜಾಲದ ಕಿಂಗ್‌ಪಿನ್‌ಗಳು ಚೀನಾ ಮೂಲದವರು. ಪ್ರಕರಣದ ಪ್ರಮುಖ ಆರೋಪಿಗಳಾದ ಸೈಯದ್ ಯಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್ ಚೀನಾ ದೇಶಕ್ಕೆ ತೆರಳಿ ಕಿಂಗ್‌ಪಿನ್‌ಗಳನ್ನು ಸಂಪರ್ಕಿಸಿದ್ದರು. ಈ ಕಿಂಗ್‌ಪಿನ್‌ಗಳ ಸೂಚನೆಯಂತೆ ತಮ್ಮದೇ ಒಂದು ಗ್ಯಾಂಗ್‌ ಕಟ್ಟಿಕೊಂಡು ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆನ್‌ಲೈನ್ ಜಾಬ್‌ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದರು. ಆರೋಪಿಗಳಾದ ಸೈಯದ್ ಯಹ್ಯಾ ಮತ್ತು ಉಮರ್ ಫಾರೂಕ್‌ ಪೀಣ್ಯ ಠಾಣೆ ವ್ಯಾಪ್ತಿಯ ನೆಲಗದರನಹಳ್ಳಿಯಲ್ಲಿ ಕಚೇರಿ ಹೊಂದಿದ್ದರು. ಈ ಕಚೇರಿ ಮೇಲೆ ದಾಳಿ ಮಾಡಿ 47 ಬ್ಯಾಂಕ್ ಪಾಸ್ ಬುಕ್‌ಗಳು, 48 ಸಿಮ್ ಕಾರ್ಡ್‌ಗಳು, 31 ಡೆಬಿಟ್ ಕಾರ್ಡ್‌ಗಳು, 9 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮಿಷನ್‌ ಕೊಟ್ಟು ದಾಖಲೆ ಖರೀದಿ:

ಆರೋಪಿಗಳು ವಂಚನೆಗಾಗಿಯೇ ಮಧ್ಯವರ್ತಿಗಳು ಹಾಗೂ ಪರಿಚಿತರ ಮುಖಾಂತರ ಸಾರ್ವಜನಿಕರ ಬ್ಯಾಂಕ್‌ ಪಾಸ್‌ ಬುಕ್‌ಗಳು, ಸಿಮ್‌ ಕಾರ್ಡ್‌ಗಳು, ಡೆಬಿಡ್‌ ಕಾರ್ಡ್‌ಗಳನ್ನು ಪಡೆದಿದ್ದರು. ವಂಚನೆ ಹಣ ವರ್ಗಾವಣೆಯಾದ ಕೂಡಲೇ ಆ ಹಣವನ್ನು ಡ್ರಾ ಮಾಡಿ, ಖಾತೆದಾರರಿಗೆ ಇಂತಿಷ್ಟು ಕಮಿಷನ್‌ ನೀಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ವ್ಯವಸ್ಥಿತ ವಂಚನೆ ಜಾಲದಲ್ಲಿ ಹಲವರು ಭಾಗಿಯಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

₹25 ಸಾವಿರ ಬಹುಮಾನ:

ಸೈಬರ್‌ ವಂಚನೆ ಜಾಲವನ್ನು ಭೇದಿಸಿ 10 ಮಂದಿ ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಶ್ಲಾಘಿಸಿದ್ದಾರೆ. ಈ ತನಿಖಾ ತಂಡಕ್ಕೆ ₹25 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ