ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪಟ್ಟಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಬ್ಯಾಂಕಿನ ಸಮಸ್ಯೆಗಳಿಗೆ ಸಂಬಂಧಿಸಿದ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು, ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಎಸ್ಸಿ-ಎಸ್ಟಿ ಜನರಿಗೆ ಸಾಲ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಕುಂಟುನೆಪ ಹೇಳಿ ಸಮುದಾಯದ ಸ್ವಯಂ ಉದ್ಯೋಗಾಂಕ್ಷಿಗಳನ್ನು ಸತಾಯಿಸುತ್ತಿದ್ದಾರೆ. ಸಿಬಿಲ್ ನೆಪದಲ್ಲಿ ದಲಿತರಿಗೆ ಬ್ಯಾಂಕ್ ಸಹಾಯ - ಸೌಲಭ್ಯದಿಂದ ವಂಚಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ ವಿತರಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಫಲಾನುಭವಿಗಳಿಗೆ ಅಗತ್ಯವಿಲ್ಲದ ದಾಖಲೆಗಳನ್ನ ತರುವಂತೆ ಪೀಡಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.ಬಹುತೇಕ ಬ್ಯಾಂಕ್‌ಗಳ ಸಿಬ್ಬಂದಿ ಗ್ರಾಹಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಕೆಲ ಸಿಬ್ಬಂದಿ ಹಿಂದಿ - ಇಂಗ್ಲಿಷ್‌ನಲ್ಲಿ ಮಾತನಾಡುವುದರಿಂದ ಸಾಕಷ್ಟು ಗೊಂದಲ ಆಗುತ್ತದೆ. ಬ್ಯಾಂಕ್ ಸಿಬ್ಬಂದಿ ಇಲ್ಲಿನ ಮಾತೃ ಭಾಷೆ ಕನ್ನಡ ಕಲಿಯಬೇಕು. ಈ ಮೂಲಕ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ದಲಿತರು ಒತ್ತಾಯಿಸಿದರು.
ಪರಸ್ಪರರಲ್ಲೇ ಕಚ್ಚಾಟ
ಸಭೆಯಲ್ಲಿ ಸಮಸ್ಯೆ ಹೇಳಿಕೊಳ್ಳಲು ದಲಿತ ಮುಖಂಡರು ಪರಸ್ಪರ ಕಚ್ಚಾಟ ನಡೆಸಿದರು. ಮುಖಂಡರು ಜಿದ್ದಿಗೆ ಬಿದ್ದವರಂತೆ ಪ್ರಶ್ನಿಸಿದ್ದರಿಂದ ಅಧಿಕಾರಿ ಮತ್ತು ಬ್ಯಾಂಕ್ ಸಿಬ್ಬಂದಿ ಮುಜುಗರಕ್ಕೊಳಗಾದರು. ಜನಾಂಗದ ಅಹವಾಲುಗಳಿಗೆ ಯಾವುದೇ ರೀತಿಯ ಪರಿಹಾರ ಸಿಗಲಿಲ್ಲ. ಕೆಲವರಂತೂ ಕೂಗಾಟ, ಚೀರಾಟ ನಡೆಸಿ ಸಭೆಯಲ್ಲಿ ಗೊಂದಲ ಸೃಷ್ಟಿಸಿದರು. ಪದೇ ಪದೆ ಗದ್ದಲ, ಗಲಾಟೆ ನಡೆಸಿದ್ದರಿಂದ ಯಾರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿಯದಂತಾಯಿತು. ಈ ಮೂಲಕ ಸಭೆ ಹಾಗೂ ಅಧಿಕಾರಿಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿರುವುದು ಸಾಕಷ್ಟು ಟೀಕೆಗೆ ಗುರಿಯಾಯಿತು.