ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಸಾಲ ಬಾಧೆಯಿಂದ ಬೇಸತ್ತ ರೈತ ಕೆರೆಗೆ ಹಾರಿ ಆತ್ಮಹತ್ಯೆ

KannadaprabhaNewsNetwork |  
Published : Mar 23, 2025, 01:34 AM ISTUpdated : Mar 23, 2025, 04:47 AM IST
22ಕೆಎಂಎನ್‌ಡಿ-10ಪದ್ಮರಾಜ್‌ | Kannada Prabha

ಸಾರಾಂಶ

ಸಾಲ ಬಾಧೆಯಿಂದ ಬೇಸತ್ತ ರೈತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಗ್ರಾಮದ ಪದ್ಮರಾಜ್ (55) ಆತ್ಮಹತ್ಯೆ ಶರಣಾದ ರೈತ.

  ನಾಗಮಂಗಲ  :  ಸಾಲ ಬಾಧೆಯಿಂದ ಬೇಸತ್ತ ರೈತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಗ್ರಾಮದ ಪದ್ಮರಾಜ್ (55) ಆತ್ಮಹತ್ಯೆ ಶರಣಾದ ರೈತ. ಒಂದು ಮುಕ್ಕಾಲು ಎಕರೆ ಕೃಷಿ ಜಮೀನು ಹೊಂದಿದ್ದ ರೈತ ಪದ್ಮರಾಜ್ ತರಕಾರಿ ಬೆಳೆಯುವ ಸಲುವಾಗಿ ಗ್ರಾಮದ ಮತ್ತೊಬ್ಬ ರೈತರ ಜಮೀನನ್ನು ಬಳಸಿಕೊಂಡು ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ನಾಲ್ಕೈದು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಲಕ್ಷಾಂತರ ರು. ಸಾಲ ಮಾಡಿದ್ದರು. ಅಲ್ಲದೇ, ಚಿನ್ನದ ಒಡವೆಗಳನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ಇದರ ಜೊತೆಗೆ ಖಾಸಗಿ ವ್ಯಕ್ತಿಗಳಿಂದಲೂ ಸಾಲ ಮಾಡಿದ್ದರು. ಟೊಮೆಟೋ ಮತ್ತು ಇನ್ನತರೆ ತರಕಾರಿ ಬೆಳೆಯುವ ಸಲುವಾಗಿ ಒಟ್ಟು 12 ಲಕ್ಷ ರು.ಗೂ ಹೆಚ್ಚು ಸಾಲ ಮಾಡಿದ್ದರು ಎಂದು ಹೇಳಲಾಗಿದೆ.

ಲಕ್ಷಾಂತರ ರು. ಸಾಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ತರಕಾರಿಗಳಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ರೈತ ಪದ್ಮರಾಜ್ ಶುಕ್ರವಾರ ಸಂಜೆ 4ರ ಸಮಯದಲ್ಲಿ ಮನೆಯಿಂದ ಹೊರಹೋದವರು ವಾಪಸ್ ಬಂದಿರಲಿಲ್ಲ. ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಕೂಡ ಪತ್ತೆಯಾಗಿರಲಿಲ್ಲ.

ಶನಿವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಪದ್ಮರಾಜ್ ಅವರ ಟವಲ್ ತೇಲಾಡುತ್ತಿರುವುದನ್ನು ಕಂಡ ಸ್ಥಳೀಯರು ಶೋಧ ಕಾರ್ಯ ನಡೆಸಿದ ವೇಳೆ ಮೃತದೇಹ ಪತ್ತೆಯಾಗಿದೆ. ಮಾಡಿರುವ ಸಾಲ ತೀರಿಸಲಾಗದೆ ಆತ್ಮಸ್ಥೈರ್ಯ ಕಳೆದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಕುಟುಂಬಸ್ಥರಿಂದ ಅಗತ್ಯ ಮಾಹಿತಿ ಪಡೆದುಕೊಂಡರು.

ಮರಣೋತ್ತರ ಪರೀಕ್ಷೆ ಬಳಿಕ ಪದ್ಮರಾಜ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಖಿನ್ನತೆಗೆ ಒಳಗಾಗಿ ಕಾವೇರಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಮದುವೆ ಆಗುವುದಾಗಿ ಅತ್ಯಾ*ರ : ಮಾಜಿ ಶಾಸಕರ ವಿರುದ್ಧ ಎಫ್‌ಐಆರ್‌