ಕನ್ನಡಪ್ರಭ ವಾರ್ತೆ ಬೆಂಗಳೂರು
ಐಷಾರಾಮಿ ಕಾರನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ವೈದ್ಯ ದಂಪತಿಯಿಂದ ₹6.20 ಕೋಟಿ ಪಡೆದು ವಂಚಿಸಿದ್ದಲ್ಲದೇ ಹಣ ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.ಮೋಸ ಹೋಗಿರುವ ವಿಜಯನಗರದ ನಿವಾಸಿ ಡಾ। ಗಿರೀಶ್ ದಂಪತಿ ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿ ನಗರದ ಬಿಇಎಲ್ ಲೇಔಟ್ ಐಶ್ವರ್ಯಗೌಡ ಎಂಬುವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ವೈದ್ಯ ಗಿರೀಶ್ ದಂಪತಿ ಅವರಿಗೆ ಸೇರಿದ ಆಸ್ಪತ್ರೆ ಇದೆ. 2022ರ ಮಾರ್ಚ್‌ನಲ್ಲಿ ಕಾಸ್ಮೆಟಿಕ್ ಸರ್ಜರಿಗೆ ಗಿರೀಶ್ ಅವರನ್ನು ಆರೋಪಿ ಐಶ್ವರ್ಯ ಭೇಟಿಯಾಗಿದ್ದಳು. ಹೀಗೆ ಪರಿಚಯವಾದ ಆರೋಪಿ, ತಾನು ರಿಯಲ್ ಎಸ್ಟೇಟ್ ಹಾಗೂ ಸೆಕೆಂಡ್ ಹ್ಯಾಂಡ್ ಕಾರುಗಳ ಡೀಲರ್ ಸಹ ಆಗಿದ್ದೇನೆ ಎಂದಿದ್ದಳು. ಕ್ರಮೇಣ ತನ್ನ ನಾಜೂಕಿನ ಮಾತಿನ ಮೂಲಕ ವೈದ್ಯರಿಗೆ ಆತ್ಮೀಯಳಾಗಿದ್ದಾಳೆ. ಹೀಗಿರುವ ದುಬಾರಿ ಮೌಲ್ಯದ ಕಾರು ಖರೀದಿಗೆ ಯೋಜಿಸಿದ್ದ ವೈದ್ಯ ಗಿರೀಶ್ ಅವರು, ಇದೇ ವಿಚಾರವಾಗಿ ಐಶ್ವರ್ಯ ಅವರನ್ನು ಸಂಪರ್ಕಿಸಿದ್ದರು.ಆಗ ಕಡಿಮೆ ಬೆಲೆಗೆ ಐಷರಾಮಿ ಕಾರು ಕೊಡಿಸುವುದಾಗಿ ಹೇಳಿದ್ದಾಳೆ. ಈ ಮಾತು ನಂಬಿದ ವೈದ್ಯ, ಆರ್‌ಟಿಜಿಎಸ್ ಮೂಲಕ ₹2.75 ಕೋಟಿ ಹಾಗೂ ₹3.75 ಕೋಟಿಯನ್ನು ನಗದು ಹೀಗೆ ಎರಡು ಹಂತದಲ್ಲಿ ಆರೋಪಿಗೆ ಒಟ್ಟು ₹6.20 ಕೋಟಿ ಕೊಟ್ಟಿದ್ದರು. ಈ ಹಣ ಸಂದಾಯವಾದ ಬಳಿಕ ವೈದ್ಯರ ಸಂಪರ್ಕ ಕಡಿತಗೊಳಿಸಿದ ಆಕೆ, ಹಣ ಕೇಳಿದರೆ ಏನಾದರೂ ಸಬೂಬು ಹೇಳುತ್ತಿದ್ದಳು.
ವೈದ್ಯರು ಜೋರು ಮಾಡಿದಾಗ ಹಣದ ವಿಚಾರ ಮಾತುಕತೆಗೆ ವಿಜಯನಗರ ಕ್ಲಬ್ ಬಳಿ ಬರುವಂತೆ ಆರೋಪಿ ಸೂಚಿಸಿದ್ದಳು. ಅಂತೆಯೇ ಕ್ಲಬ್ ಬಳಿ ತೆರಳಿದ ವೈದ್ಯ ಗಿರೀಶ್ ದಂಪತಿ ಮೇಲೆ ಐಶ್ವರ್ಯ ಗಲಾಟೆ ಮಾಡಿದ್ದಾಳೆ. ‘ನೀನು ಹಣ ಕೇಳಿದರೆ ಅತ್ಯಾಚಾರ’ ಮಾಡಿರುವುದಾಗಿ ಪ್ರಕರಣ ದಾಖಲಿಸುತ್ತೇನೆ. ಆ ಮೇಲೆ ಮಾಧ್ಯಮಗಳಿಗೆ ತಿಳಿಸಿ ನಿಮ್ಮ ಮರ್ಯಾದೆ ಕಳೆಯುವುದಾಗಿ ಆಕೆ ಬೆದರಿಸಿದ್ದಳು. ಇದರಿಂದ ವೈದ್ಯ ಗಿರೀಶ್ ಹೆದರಿದಾಗ ಮತ್ತೆ ₹5 ಲಕ್ಷ ಕೊಡುವಂತೆ ಆಕೆ ಬೇಡಿಕೆ ಇಟ್ಟಿದ್ದಳು. ಈ ಕಿರುಕುಳ ಸಹಿಸಲಾರದೆ ಕೊನೆಗೆ ವಿಯನಗರ ಠಾಣೆಗೆ ತೆರಳಿ ವೈದ್ಯ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ಪತ್ತೆಗೆ ತನಿಖೆ ನಡೆಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.