ಸುಮ್ಮ ಸುಮ್ಮನೆ ದುರಾಸೆಗೆ ಒಳಗಾಗಿ ಅಪರಿಚಿತರ ಮೆಸೆಜ್ ನೋಡದಂತೆ ಸಾರ್ವಜನಿಕರಿಗೆ ಎಡಿಜಿಪಿ ಅಲೋಕಕುಮಾರ್ ಸಲಹೆ
ಕನ್ನಡಪ್ರಭ ವಾರ್ತೆ ಬೀದರ್ಇಂದಿನ ಕಾಲದಲ್ಲಿ ಸೈಬರ್ ಅಪರಾಧ ದಿನೇ ದಿನೇ ಹಚ್ಚುತ್ತಲೆ ಇದೆ, ಇಂತಹ ಸಂದರ್ಭದಲ್ಲಿ ಮೋಸಕ್ಕೆ ಒಳಗಾದವರು ವಿಳಂಬ ಮಾಡದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಎಡಿಜಿಪಿ ತರಬೇತಿ ಅಲೋಕಕುಮಾರ ಸಾರ್ವಜನಿಕರಿಗೆ ತಿಳಿಸಿದರು.
ಅವರು ಮಂಗಳವಾರ ಸಂಜೆ ಬೀದರ್‌ನ ಎಸ್ಪಿ ಕಚೇರಿ ಆವರಣದಲ್ಲಿ ಸಾರ್ವಜನಿಕರೊಂದಿಗೆ ಜನ ಸಂಪರ್ಕ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮ್ಮ ಸುಮ್ಮನೆ ದುರಾಸೆಗೆ ಒಳಗಾಗಬಾರದು. ಅಪರಿಚಿತರ ಫೋನ್, ಮೆಸೆಜ್ ನೋಡಬೇಡಿ, ಡಿಜಿಟಲ್ ಫಾರಂನಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ.ನಮ್ಮ ಕುಟುಂಬದ ವೈಯಕ್ತಿಕ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳಬಾರದು. ಹಿಂದಿನ ಕಾಲದಲ್ಲಿ ತಂಡದೊಂದಿಗೆ ಕಳ್ಳರು ದರೋಡೆ ಮಾಡುತ್ತಿದ್ದರು, ಆದರೆ ಇಂದು ಹಗಲು ದರೋಡೆ ನಡೆದಿದ್ದು, ಕೇವಲ ಒಂದು ಕ್ಲಿಕ್ ಮಾಡುತ್ತಲೆ ಲಕ್ಷಾಂತರ ರು. ದೋಚುತ್ತಿದ್ದಾರೆ. ಇಂದು ಸೈಬರ್ ಕ್ರೈಂ ಒಂದು ರೀತಿಯ ಹೊಸ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಯಾರಾದರೂ ನಿಮಗೆ ಮೋಸ ಮಾಡಿದ್ದರೆ ಧೈರ್ಯದಿಂದ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿ ಎಂದರು.
ಬೀದರ್ ನಗರಕ್ಕೆ ಹಿಂದಿನ ಇತಿಹಾಸ ಇದೆ. ಇಲ್ಲಿನ ಜನ ಮುಗ್ಧರು ಹಾಗೂ ಭಾತೃತ್ವದ ಭಾವನೆ ಇರುವವರಾಗಿದ್ದಾರೆ. ಹೀಗಾಗಿ ನೀವು ನಮ್ಮೊಂದಿಗೆ ಬೆರೆತು, ಸಹಕಾರಿಯಾಗಿರಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕರ ಕಳವಾದ ವಸ್ತುಗಳನ್ನು ಹಿಂದಿರುಗಿಸಿದರು. ಹಮೀದ ಅಕ್ಕಸಾಲಿಗ ಎಂಬುವವರ 155 ಗ್ರಾಂ ಚಿನ್ನ, ಕಾವೇರಿ ಕುಂಬಾರವಾಡಾ ಅವರ 40 ಗ್ರಾಂ ಚಿನ್ನ, ನವೀನ ಬ್ಯಾಂಕ್ ಕಾಲೋನಿಯವರ 40.5 ಗ್ರಾಂ ಚಿನ್ನ ಹಾಗೂ 10 ತೋಲೆ ಬೆಳ್ಳಿ, ಸಂಜೀವಕುಮಾರ 35 ಗ್ರಾಂ ಚಿನ್ನ, ರಾಜಕುಮಾರ ಅಲ್ಲಮಪ್ರಭು ನಗರ 8.5 ಗ್ರಾಂ ಬಂಗಾರದ ಸ್ವತ್ತನ್ನು ಎಡಿಜಿಪಿ ಅಲೋಕಕುಮಾರ್ ವಾರಸುದಾರರಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಈಶಾನ್ಯ ವಲಯದ ಡಿಐಜಿ ಅಜಯ ಹಿಲೋರಿ ಇದ್ದರು. ಎಸ್ಪಿ ಚನ್ನಬಸವಣ್ಣನವರು ಸ್ವಾಗತಿಸಿದರು. ಎಎಸ್ಪಿ ಮಹೇಶ ಮೋಘಣ್ಣನವರು, ಬೀದರ್ ಡಿವೈಎಸ್ಪಿ, ಸಿಪಿಐಗಳು ಇದ್ದರು.ಬಿಜಿ ಶೆಟಕಾರ, ಗುರುನಾಥ ಕೊಳ್ಳೂರ, ಡಾ. ಚಂದ್ರಕಾಂತ ಗುದಗೆ, ನಿಜಾಮೋದ್ದಿನ್, ಮನಪ್ರೀತಸಿಂಗ (ಬಂಟಿ) ನಗರಸಭೆ ಅಧ್ಯಕ್ಷ ಎಂಡಿ ಗೌಸ್, ಡಾ. ಮಕ್ಸೂದ ಚಂದಾ, ಎಂಡಿ ಆಸಿಫೋದ್ದಿನ್ ಸೇರಿದಂತೆ ಇನ್ನಿತರರು ಇದ್ದರು.
--ಚಿತ್ರ 21ಬಿಡಿಆರ್60
ಬೀದರ್‌ನ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎಡಿಜಿಪಿ ಅಲೋಕಕುಮಾರ್ ಕಳವಾದ ಸ್ವತ್ತನ್ನು ವಾರಸುದಾರರಿಗೆ ಹಿಂದಿರುಗಿಸಿದರು.---