ಕಾಲೇಜುಗಳಲ್ಲಿ ಡ್ರಗ್ಸ್ ನಿಗ್ರಹ ಸಮಿತಿ ರಚಿಸಿ : ಪೊಲೀಸರಿಗೆ ಡಾ.ಜಿ.ಪರಮೇಶ್ವರ್ ಸೂಚನೆ

KannadaprabhaNewsNetwork |  
Published : Jun 27, 2025, 02:03 AM ISTUpdated : Jun 27, 2025, 09:37 AM IST
Kanteerva 1 | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನ ತಡಗೆಟ್ಟುವ ಸಲುವಾಗಿ ಕಾಲೇಜುಗಳಲ್ಲಿ ಡ್ರಗ್ಸ್ ನಿಗ್ರಹ ಸಮಿತಿ ರಚಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

 ಬೆಂಗಳೂರು :  ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನ ತಡಗೆಟ್ಟುವ ಸಲುವಾಗಿ ಕಾಲೇಜುಗಳಲ್ಲಿ ಡ್ರಗ್ಸ್ ನಿಗ್ರಹ ಸಮಿತಿ ರಚಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾದಕ ವಸ್ತು ವ್ಯಸನಕ್ಕೆ ಸಿಲುಕಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ರಾಜ್ಯದ ಸರಿ ಸುಮಾರು 6.5 ಲಕ್ಷ ವಿದ್ಯಾರ್ಥಿಗಳಿಗೆ ಡ್ರಗ್ಸ್ ದುಷ್ಪರಿಣಾಮ ಕುರಿತು ಅರಿವು ಮೂಡಿಸಲಾಗಿದೆ. ಪ್ರತಿ ತಿಂಗಳು ತಮ್ಮ ಠಾಣಾ ಸರಹದ್ದಿನ ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯಬೇಕು. ಅಲ್ಲದೆ ಡ್ರಗ್ಸ್ ಮಾರಾಟ ಜಾಲಕ್ಕೆ ವಿದ್ಯಾರ್ಥಿಗಳು ಸಿಲುಕದಂತೆ ತಡೆಗಟ್ಟಲು ಕಾಲೇಜು ಮಟ್ಟದಲ್ಲಿ ಮಾದಕ ವಸ್ತು ನಿಗ್ರಹ ಸಮಿತಿ ರಚಿಸುವಂತೆ ಸೂಚಿಸಲಾಗಿದೆ ಎಂದರು.

ಡ್ರಗ್ಸ್ ವಿಚಾರದಲ್ಲಿ ರಾಜ್ಯ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದಿಲ್ಲ. ಡ್ರಗ್ಸ್ ಚಟುವಟಿಕೆಯ ಬಗ್ಗೆ ಗೊತ್ತಾದ ಕೂಡಲೇ ಸಾರ್ವಜನಿಕರು ಕ್ಯೂಆರ್ ಕೋಡ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಬೇಕು. ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾನೂನುಬಾಹಿರ ಕೃತ್ಯಗಳಿಗೆ ನಾಗರಿಕರು ಆಸ್ಪದ ಕೊಡಬಾರದು ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಆಂದೋಲನ ನಡೆದಿದೆ. ಡ್ರಗ್ಸ್‌ನಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಜಾಲವನ್ನು ಕೇವಲ ಕಾನೂನು ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ಜನರು ಜಾಗೃತರಾಗಬೇಕು ಎಂದು ತಿಳಿಸಿದರು.

ಈಗಾಗಲೇ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಆಸ್ತಿ ಮುಟ್ಟುಗೋಲು ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣದಂಥ ಕಠಿಣ ಕ್ರಮ ಜರುಗಿಸಲಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲೇ ಮಾದಕ ವ್ಯಸನ ಮುಕ್ತ ಕರ್ನಾಟಕ ಮಾಡುವುದಾಗಿ ಮುಖ್ಯಮಂತ್ರಿ ಅವರು ಘೋಷಿಸಿದ್ದಾರೆ. ಪಂಜಾಬ್‌ನಲ್ಲಿ ಡ್ರಗ್ಸ್ ಪರಿಣಾಮದಿಂದ ಉಡ್ತಾ ಪಂಜಾಬ್ ಎಂದು ಕರೆಯುತ್ತಿದ್ದರು. ಇದಕ್ಕೆ ರಾಜ್ಯದಲ್ಲಿ ಆಸ್ಪದ ನೀಡುವುದಿಲ್ಲ. ಡ್ರಗ್ಸ್ ಚಟುವಟಿಕೆಯನ್ನು ಮಟ್ಟಹಾಕಲು ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಗುಡುಗಿದರು.

ಈ ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಸೈಬರ್ ಹಾಗೂ ಮಾದಕ ವಸ್ತು ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

50 ಕೋಟಿ ರು. ಡ್ರಗ್ಸ್ ಜಪ್ತಿ:

ಕಳೆದ ಒಂದು ವರ್ಷದಲ್ಲಿ ನಾಲ್ಕು ಟನ್‌ ಗಾಂಜಾ ಸೇರಿ 50 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 200ಕ್ಕೂ ಹೆಚ್ಚು ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ ಅವರು ಜಪ್ತಿಯಾದ ಡ್ರಗ್ಸ್‌ ಅನ್ನು ನಾಶಗೊಳಿಸುವ ಕಾರ್ಯಕ್ಕೆ ಗೃಹ ಸಚಿವರು ಆನ್‌ಲೈನ್‌ ಮೂಲಕ ಚಾಲನೆ ನೀಡಿದರು. ಅಲ್ಲದೆ ಡ್ರಗ್ಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಕ್ಯೂ ಆರ್ ಕೋಡ್‌ ಅನಾವರಣಗೊಳಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ಕಲಹ: ಕೊಲೆ ಅಂತ್ಯ
ಪೊಲೀಸ್‌ ಠಾಣೆ ಸಮೀಪ ಪಾನಮತ್ತ ದಂಪತಿಯ ರಂಪಾಟ