ತನ್ನ ಕಾರಿನಲ್ಲಿ ಸೈರನ್ ಸದ್ದು ಮಾಡಿ ಪೊಲೀಸ್ ಹೆಸರಲ್ಲಿ ಕ್ಯಾಬ್ ಡ್ರೈವರ್‌ ಮೇಲೆ ಹಲ್ಲೆ ಮಾಡಿದ್ದ ಚಾಲಕ ಸೆರೆ

KannadaprabhaNewsNetwork | Updated : Apr 19 2025, 04:18 AM IST

ಸಾರಾಂಶ

ತನ್ನ ಕಾರಿನಲ್ಲಿ ಸೈರನ್ ಸದ್ದು ಮಾಡಿ ಹುಚ್ಚಾಟ ಮಾಡಿದ್ದಲ್ಲದೆ ಪೊಲೀಸ್ ಎಂದು ಹೇಳಿ ಕ್ಯಾಬ್ ಚಾಲಕನೊಬ್ಬನ ಮೇಲೆ ಪುಂಡಾಟಿಕೆ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ತನ್ನ ಕಾರಿನಲ್ಲಿ ಸೈರನ್ ಸದ್ದು ಮಾಡಿ ಹುಚ್ಚಾಟ ಮಾಡಿದ್ದಲ್ಲದೆ ಪೊಲೀಸ್ ಎಂದು ಹೇಳಿ ಕ್ಯಾಬ್ ಚಾಲಕನೊಬ್ಬನ ಮೇಲೆ ಪುಂಡಾಟಿಕೆ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರು ಸಮೀಪದ ನಿವಾಸಿ ನಿತುಲ್‌ ರಾಜ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಪುಲಿಕೇಶಿನಗರದ ಬಸಪ್ಪ ರಸ್ತೆಯಲ್ಲಿ ಈ ಪುಂಡಾಟಿಕೆ ನಡೆಸಿದ್ದ. ಈ ಬಗ್ಗೆ ಹಲ್ಲೆಗೊಳಗಾಗಿದ್ದ ಕಾರು ಚಾಲಕ ಸಂತೋಷ್ ಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದ್ದಾರೆ.

ಕಾರು ಚಾಲಕನಾಗಿದ್ದ ನಿತುಲ್‌, ಒಂದೆಡೆ ನೆಲೆ ನಿಲ್ಲದೆ ಅಲೆಯುತ್ತಿದ್ದ. ಮೊದಲು ಹೆಣ್ಣೂರು ಸಮೀಪ ಮನೆ ಮಾಡಿದ್ದ ಆತ, ಇತ್ತೀಚಿಗೆ ಲಾಡ್ಜ್‌ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದ. ಕೆಲ ದಿನಗಳ ಹಿಂದೆ ಬಸಪ್ಪ ರಸ್ತೆಯಲ್ಲಿ ಬರುವಾಗ ತನ್ನ ಕಾರಿನ ಸೈರನ್ ಮಾಡಿಕೊಂಡು ಚಲಾಯಿಸುತ್ತಿದ್ದ. ಈ ವೇಳೆ ಆ ರಸ್ತೆಯಲ್ಲಿ ಸಾಗುತ್ತಿದ್ದ ಸಂತೋಷ್ ಕುಮಾರ್ ಅವರ ಕಾರಿಗೆ ನಿತುಲ್ ಕಾರು ಸ್ಪರ್ಶಿಸಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ತಾನು ಪೊಲೀಸ್ ಎಂದು ಹೇಳಿ ಸಂತೋಷ್ ಮೇಲೆ ದುಂಡಾವರ್ತನೆ ತೋರಿ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಪುಲಿಕೇಶಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಬಳಿಕ ತಾಂತ್ರಿಕ ಮಾಹಿತಿ ಆಧರಿಸಿ ಆತನನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಫೋಕ್ಸ್‌ ವ್ಯಾಗನ್ ಕಾರು ಮಾಲಿಕರ ಸಂಘ ಇದ್ದು, ಅದರಲ್ಲಿ ನಿತುಲ್ ಚಾಲಕನಾಗಿದ್ದ. ಈ ಸಂಘಟನೆ ಗಣರಾಜೋತ್ಸವ ದಿನ ನಿಮಿತ್ತ ಕಾರುಗಳ ರ್ಯಾಲಿ ನಡೆಸಿದ್ದ ವೇಳೆ ಮುಂಗಾವಲು ಕಾರಿಗೆ ಆತ ಚಾಲಕನಾಗಿದ್ದ. ಈ ಕಾರ್ಯಕ್ರಮಕ್ಕೆ ಆತನ ಕಾರಿಗೆ ಸೈರನ್ ಮತ್ತು ರೆಡ್‌ಲೈಟ್ ದೀಪವನ್ನು ಕಾನೂನು ಬಾಹಿರವಾಗಿ ಅಳವಡಿಸಿಕೊಂಡಿದ್ದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article