ಮದ್ಯ ಸೇವಿಸಿ ವಾಹನ ಚಾಲನೆ: 43 ಚಾಲಕರ ವಿರುದ್ಧ ಕೇಸ್‌

KannadaprabhaNewsNetwork |  
Published : Feb 19, 2024, 01:33 AM ISTUpdated : Feb 19, 2024, 11:55 AM IST
If improperly dealt with traffic police, hefty fines-New rule enforcement

ಸಾರಾಂಶ

ಬೆಂಗಳೂರಿನಲ್ಲಿ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಮದ್ಯ ಸೇವಿಸಿ ವಾಹನ ಓಡಿಸುತ್ತಿದ್ದ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಸಂಚಾರ ಪೊಲೀಸರು ಶನಿವಾರ ರಾತ್ರಿ ನಗರದ ವಿವಿಧೆಡೆ ನಡೆಸಿದ ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧದ ವಿಶೇಷ ಕಾರ್ಯಾಚರಣೆ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸಿದ 43 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಗರದ ಮೆಜೆಸ್ಟಿಕ್‌, ಆನಂದರಾವ್‌ ವೃತ್ತ, ಮೌರ್ಯ ಸರ್ಕಲ್‌, ಯಶವಂತಪುರ, ಶಾಂತಿನಗರ, ಕೆ.ಆರ್‌.ಪುರ ಸೇರಿದಂತೆ ನಗರದ ವಿವಿಧೆಡೆ ಸಂಚಾರ ಪೊಲೀಸರು ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 3,804 ವಿವಿಧ ವಾಹನಗಳ ಚಾಲಕರನ್ನು ತಪಾಸಣೆ ಮಾಡಿದ್ದಾರೆ.

ಈ ಪೈಕಿ ದ್ವಿಚಕ್ರ ವಾಹನ 14, ಕಾರು/ಕ್ಯಾಬ್‌ 13, ಆಟೋರಿಕ್ಷಾ 4, 12 ಖಾಸಗಿ ಬಸ್‌ಗಳು ಸೇರಿದಂತೆ ಒಟ್ಟು 43 ವಾಹನಗಳ ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧದ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಮಟ್ಕಾ ಮೇಲೆ ಸಿಸಿಬಿ ದಾಳಿ: ಇಬ್ಬರ ಸೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ವಿಶೇಷ ತನಿಖಾ ದಳದ ಪೊಲೀಸರು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕಲ್ಯಾಣಿ ಮತ್ತು ಶ್ರೀದೇವಿ ಹೆಸರಿನ ಮಟ್ಕಾ ಜೂಜಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನೀಲಸಂದ್ರದ ರೋಸ್‌ ಗಾರ್ಡನ್‌ ನಿವಾಸಿ ಅಕ್ರಂ ಪಾಷಾ(54) ಮತ್ತು ಕಾಚಾರಕನಹಳ್ಳಿಯ ವಿನೋದ್‌ ರಾಜ್‌(32) ಬಂಧಿತರು. ಆರೋಪಿಗಳಿಂದ ಒಟ್ಟು ₹15,600 ನಗದು ಹಾಗೂ ಒಂದು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ.

ಅಶೋಕನಗರ ಠಾಣಾ ವ್ಯಾಪ್ತಿಯ ನೀಲಸಂದ್ರದ ಅಂಗಡಿ ಎದುರು ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕಲ್ಯಾಣಿ ಮತ್ತು ಶ್ರೀದೇವಿ ಹೆಸರಿನ ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಅಕ್ರಂ ಪಾಷಾನನ್ನು ಬಂಧಿಸಿದ್ದಾರೆ. ₹10,500 ನಗದು ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬಾಣಸವಾಡಿ ಠಾಣಾ ವ್ಯಾಪ್ತಿಯ ಕೆಎಚ್‌ಬಿ ಕ್ವಾಟ್ರಸ್‌ ಬಳಿ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣವನನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿ ವಿನೋದ್‌ ರಾಜ್‌ನನ್ನು ಬಂಧಿಸಲಾಗಿದೆ. ₹5,100 ನಗದು ಜಪ್ತಿ ಮಾಡಲಾಗಿದೆ. ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!