ಅಮಲಿನಲ್ಲಿ ಜಗಳ: ಮಹಡಿಯಿಂದ ನೂಕಿ ಸ್ನೇಹಿತನ ಕೊಂದ ಗೆಳೆಯ

KannadaprabhaNewsNetwork | Updated : Jun 30 2024, 05:46 AM IST

ಸಾರಾಂಶ

  ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  

 ಬೆಂಗಳೂರು : ಮದ್ಯದ ಪಾರ್ಟಿ ಮಾಡುವಾಗ ಗೆಳೆಯರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ವಿಶಾಲ್‌ ಯಾದವ್‌(25) ಕೊಲೆಯಾದ ದುರ್ದೈವಿ. ಶುಕ್ರವಾರ ರಾತ್ರಿ 12 ಗಂಟೆಗೆ ಅಂಜನಾನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕೊಲೆ ಬಳಿಕ ಆರೋಪಿ ಅಭಿಷೇಕ್‌ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ವಿಶಾಲ್‌ ಮತ್ತು ಕೊಲೆಗೈದ ಅಭಿಷೇಕ್‌ ಉತ್ತರಪ್ರದೇಶ ಮೂಲದವರು. ಉದ್ಯೋಗ ಅರಸಿ ಕೆಲ ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ಅಂಜನಾನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಪೇಂಟಿಂಗ್‌ ಕೆಲಸ ಮಾಡಿಕೊಂಡು ಆ ಕಟ್ಟಡದಲ್ಲೇ ಉಳಿದುಕೊಂಡಿದ್ದರು. ವಿಶಾಲ್‌, ಅಭಿಷೇಕ್‌ ಸೇರಿ ನಾಲ್ವರು ಸ್ನೇಹಿತರು ಕೆಲಸ ಮುಗಿಸಿ ಶುಕ್ರವಾರ ರಾತ್ರಿ ನಿರ್ಮಾಣ ಹಂತದ ಕಟ್ಟಡದ 2ನೇ ಮಹಡಿಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಾರೆ.

ಕಟ್ಟಡದ 2ನೇ ಮಹಡಿಯಿಂದ ನೂಕಿ ಕೊಲೆ:

ರಾತ್ರಿ ಸುಮಾರು 12 ಗಂಟೆಗೆ ಕ್ಷುಲ್ಲಕ ಕಾರಣಕ್ಕೆವಿಶಾಲ್‌ ಮತ್ತು ಅಭಿಷೇಕ್‌ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಅಭಿಷೇಕ್‌ ಏಕಾಏಕಿ ವಿಶಾಲ್‌ನನ್ನು 2ನೇ ಮಹಡಿಯಿಂದ ಕೆಳಗೆ ನೂಕಿ ಪರಾರಿಯಾಗಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿಶಾಲ್‌ನನ್ನು ಉಳಿದಿಬ್ಬರು ಸ್ನೇಹಿತರು ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ವಿಶಾಲ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಉತ್ತರಪ್ರದೇಶದಲ್ಲಿರುವ ಮೃತನ ಕುಟುಬಸ್ಥರಿಗೆ ಮಾಹಿತಿ ನೀಡಿದ್ದು, ಅವರು ಬೆಂಗಳೂರಿಗೆ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗುವುದು. ಈ ಸಂಬಂಧ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article