ಕೋಟ್ಯಂತರ ರು. ಲೂಟಿ ಹೊಡೆದಿರುವ ಆರೋಪ : ಬಿಬಿಎಂಪಿ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ

KannadaprabhaNewsNetwork | Updated : Jan 08 2025, 04:20 AM IST

ಸಾರಾಂಶ

ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ ಕೋಟ್ಯಂತರ ರು. ಲೂಟಿ ಹೊಡೆದಿರುವ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ ಕೋಟ್ಯಂತರ ರು. ಲೂಟಿ ಹೊಡೆದಿರುವ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ನಾಲ್ಕು ವಲಯ ಕಚೇರಿಗಳಾದ ಮಹಾದೇವಪುರ, ಬೊಮ್ಮನಹಳ್ಳಿ, ಆರ್‌.ಆರ್‌.ನಗರ, ಕೆಂಗೇರಿ ಕಚೇರಿಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಡಾ.ಬಿ.ಎಸ್‌.ಪ್ರಹ್ಲಾದ್‌ ಕಚೇರಿಯಲ್ಲಿ ಪ್ರಮುಖವಾಗಿ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಅಕ್ರಮ ಸಂಬಂಧ ದಾಖಲೆಗಳು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಬಿಬಿಎಂಪಿ ವ್ಯಾಪ್ತಿಯ 27 ವಿಭಾಗದ ಕಾರ್ಯಕಾರಿ ಎಂಜಿನಿಯರ್‌ಗಳು ಮತ್ತು 63 ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಪ್ರಹ್ಲಾದ್ ಮುಖ್ಯಸ್ಥರಾಗಿರುವುದರಿಂದ ಅವರ ಕಚೇರಿ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ. ಮಂಗಳವಾರ ಬೆಳಗ್ಗೆ ಶೋಧ ಕಾರ್ಯ ಆರಂಭಿಸಿರುವ ಇಡಿ ಅಧಿಕಾರಿಗಳು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಬುಧವಾರ ಸಹ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

ಬಿಬಿಎಂಪಿ ಕೇಂದ್ರ ಕಚೇರಿಗೆ 7 ಮಂದಿಯ ಇ.ಡಿ. ಅಧಿಕಾರಿಗಳ ತಂಡ ಪ್ರಹ್ಲಾದ್‌ ಕಚೇರಿಗೆ ತೆರಳಿ 2016-2019ರ ಅವಧಿಯಲ್ಲಿ ನಡೆದ ಕೊಳವೆಬಾವಿ ಕೊರೆಸಿರುವ ಸಂಬಂಧ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಿತು. ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಗಳನ್ನು ಸಹ ಕರೆಸಿ ಅವರಿಂದಲೂ ಯೋಜನೆಗೆ ಸಂಬಂಧಿಸಿದ ದಾಖಲೆಗಳ ಮಾಹಿತಿಯನ್ನು ಕಲೆ ಹಾಕಲಾಗಿದೆ. 8 ವಲಯದ ಮುಖ್ಯ ಎಂಜಿನಿಯರ್‌ಗಳನ್ನು ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ ಎಂದು ಹೇಳಲಾಗಿದೆ.

ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ನಡೆಸಿದ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ಮಹಾದೇವಪುರ, ಬೊಮ್ಮನಹಳ್ಳಿ, ಆರ್‌.ಆರ್‌.ನಗರ, ಕೆಂಗೇರಿ ಕಚೇರಿಗಳಲ್ಲಿಯೂ ಶೋಧ ಕಾರ್ಯ ನಡೆಸಲಾಯಿತು. ಪರಿಶೀಲನೆ ವೇಳೆ ಅವ್ಯವಹಾರ ನಡೆಸಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ದಾಖಲೆಗಳ ಶೋಧ ಕಾರ್ಯ ಮುಂದುವರಿಸಲಾಗಿದೆ ಎನ್ನಲಾಗಿದೆ.

ಕೊಳವೆಬಾವಿ ಅವ್ಯವಹಾರ: ಬಿಜೆಪಿ ಮುಖಂಡನಿಂದ ದೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸುವ ಸಂಬಂಧ 2016 ರಿಂದ 2019ರ ಅವಧಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತ ಇದ್ದು, ಈ ಅವಧಿಯಲ್ಲಿ ನಡೆದಿರುವ ಅಕ್ರಮ ಬಗ್ಗೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ತನಿಖೆ ನಡೆಸುವಂತೆ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಇಡಿ ಅಧಿಕಾರಿಗಳು ಇದೀಗ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಏನಿದು ಹಗರಣ?

2016-19ರ ಅವಧಿಯಲ್ಲಿ ಬೊಮ್ಮನಹಳ್ಳಿ, ಆರ್.ಆರ್.ನಗರ, ಮಹದೇವಪುರ, ಯಲಹಂಕ ಸೇರಿದಂತೆ ಇತರೆ ವಿಧಾನಸಭಾ ಕ್ಷೇತ್ರದ 68 ವಾರ್ಡ್‌ಗಳಲ್ಲಿ 9,558 ಬೋರ್‌ವೆಲ್ ಕೊರೆಸಲಾಗಿದ್ದು, ಇದರ ಜೊತೆಗೆ 976 ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ದಾಖಲೆ ಸೃಷ್ಟಿಸಿದ್ದರು. ಆದರೆ, ಒಂದು ಸಾವಿರಕ್ಕೂ ಕಡಿಮೆ ಬೋರ್‌ವೆಲ್‌ ಕೊರೆಸಿ ಬಿಬಿಎಂಪಿ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟು ಕೋಟ್ಯಂತರ ರು. ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ದೂರು ನೀಡಿದ್ದರು. ಯೋಜನೆಯಲ್ಲಿ 400 ಕೋಟಿ ರು.ಗಿಂತ ಅಧಿಕ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಅಲ್ಲದೇ, ಹಗರಣದ ಬಗ್ಗೆ 273 ಪುಟಗಳ ದಾಖಲೆ ಬಿಡುಗಡೆ ಮಾಡಿದ್ದರು. ಎನ್‌.ಆರ್‌.ರಮೇಶ್‌ ದೂರಿನ ಮೇರೆಗೆ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.

Share this article