ವಾಲ್ಮೀಕಿ ನಿಗಮ ಕೇಸ್‌ ಮಾಜಿ ಸಚಿವ ನಾಗೇಂದ್ರಗೆ ಬೇಲ್‌ ಭಾಗ್ಯ - 3 ತಿಂಗಳ ಜೈಲುವಾಸ ಅಂತ್ಯ

Published : Oct 15, 2024, 07:20 AM ISTUpdated : Oct 15, 2024, 07:21 AM IST
MLA Nagendra

ಸಾರಾಂಶ

ಜು.12ರಿಂದ ಜೈಲು ಸೇರಿದ್ದ ಮಾಜಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.12ರಿಂದ ಜೈಲು ಸೇರಿದ್ದ ಮಾಜಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.

ಈ ಮೂಲಕ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣದ ಕೇಸಿನಲ್ಲಿ ಜೈಲು ಹಕ್ಕಿಯಾಗಿದ್ದ ಮಾಜಿ ಸಚಿವರಿಗೆ ಇದೀಗ ರಿಲೀಫ್ ಸಿಕ್ಕಂತಾಗಿದೆ. ಶಿವಮೊಗ್ಗದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ನಿಗಮದ ಹಣವನ್ನು ಸಚಿವರ ಸೂಚನೆಯ ಮೇರೆಗೆ ಬೇರೆ ಬೇರೆ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ತನ್ನ ಮೇಲೆ ಆರೋಪ ಬರಬಹುದು ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲಿಯೇ ತನಿಖೆ ನಡೆಸಲಾಗಿದ್ದು, ಇದರಲ್ಲಿ ಸಚಿವ ಬಿ. ನಾಗೇಂದ್ರ ಅವರ ಕೈವಾಡವಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತನಿಖೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದು ವಿಚಾರಣೆ ಆರಂಭಿಸಿತ್ತು. ಇದಾದ ನಂತರ, ಅವರ ಮೇಲಿನ ಆರೋಪಗಳು ದೃಢವಾಗುತ್ತಿದ್ದಂತೆ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ನಂತರ ವಾರ್ಜ್‌ ಶೀಟ್ ಸಲ್ಲಿಕೆ ಮಾಡಲಾಗಿದ್ದು, ಆರೋಪಿ ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಕೋರ್ಟ್ ಆದೇಶದ ಮೇರೆಗೆ ಜು.12ರಿಂದ ಜೈಲು ಹಕ್ಕಿಯಾಗಿದ್ದ ನಾಗೇಂದ್ರ ಅವರಿಗೆ ಇಂದು ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ಬೆಂಗಳೂರಿನ 82 ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಂದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಜಾಮೀನಿನ ಮೇಲೆ ಹೊರಗೆ ಬರಲು 2 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ನೀಡುವಂತೆ ಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ. ಇನ್ನು ಸೋಮವಾರ ಸಂಜೆ ವೇಳೆ ಜಾಮೀನು ಮಂಜೂರು ಆಗಿದ್ದು, ಈ ಆದೇಶವನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸಿ, ಷರತ್ತುಗಳನ್ನು ಪೂರೈಸಿದ ನಂತರ ನಾಗೇಂದ್ರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಆದ್ದರಿಂದ ಇಂದು ಈ ಎಲ್ಲ ಪ್ರಕ್ರಿಯೆ ಮಾಡಲು ಸಮಯಾವಕಾಶ ಇಲ್ಲದ ಹಿನ್ನಲೆಯಲ್ಲಿ ನಾಳೆ ಮಂಗಳವಾರ ನಾಗೇಂದ್ರ ಅವರು ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಯಿದೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!