ನಗರದಲ್ಲಿ ದುಬಾರಿ ಬೈಕ್‌ ಕದ್ದು ತಮಿಳುನಾಡಿನಲ್ಲಿ ಮಾರಾಟ :ಬಂಧನ

KannadaprabhaNewsNetwork | Updated : Jun 01 2024, 04:34 AM IST

ಸಾರಾಂಶ

ಬೆಂಗಳೂರಿನಲ್ಲಿ ಬೈಕ್‌ ಕಳವು ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು ;  ಮೋಜು-ಮಸ್ತಿ, ದುಶ್ಚಟಗಳಿಗೆ ಸುಲಭವಾಗಿ ಹಣ ಹೊಂದಿಸಲು ನಗರದ ವಿವಿಧೆಡೆ ದುಬಾರಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಹೊಸೂರಿನ ಅಮೃತನಗರ ನಿವಾಸಿ ರವಿಚಂದ್ರ ಅಲಿಯಾಸ್‌ ಕುಂಟ(21), ತಿರುಪತ್ತೂರು ಜಿಲ್ಲೆ ಮೊದನೂರು ನಿವಾಸಿ ಮೋಹನ್‌ ಕುಮಾರ್‌ ಅಲಿಯಾಸ್‌ ಬುಲೆಟ್‌(29), ಬೆಂಗಳೂರಿನ ನಾಗನಾಥಪುರ ನಿವಾಸಿ ಗೋವಿಂದರಾಜು ಅಲಿಯಾಸ್ ಶಿವ(19) ಮತ್ತು ಗೋವಿಂದಶೆಟ್ಟಿ ಪಾಳ್ಯದ ಅಮೃತ್ ಕುಮಾರ್ (26) ಬಂಧಿತರು. ಆರೋಪಿಗಳಿಂದ 45 ಲಕ್ಷ ರು. ಮೌಲ್ಯದ 31 ದ್ವಿಚಕ್ರ ವಾಹನಗಳು, 10 ಗ್ರಾಂ ತೂಕದ ಚಿನ್ನದ ಸರ ಹಾಗೂ 1 ಕಾರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಿಗೆ ಅಪರಾಧ ಹಿನ್ನೆಲೆ:

ಬಂಧಿತ ಆರೋಪಿಗಳ ಪೈಕಿ ಮೋಹನ್ ಕುಮಾರ್ ವಿರುದ್ಧ ಈ ಹಿಂದೆ ಹೊಸೂರು ಠಾಣೆಯಲ್ಲಿ ರಾಬರಿ ಪ್ರಕರಣ ಹಾಗೂ ಮತ್ತೊಬ್ಬ ಆರೋಪಿ ಅಮೃತ್ ಕುಮಾರ್ ವಿರುದ್ಧ ಕೃಷ್ಣಗಿರಿ ಜಿಲ್ಲೆಯ ಠಾಣೆಯೊಂದರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಇಬ್ಬರೂ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಪರಿಶೀಲಿಸಲಾಗುತ್ತಿದೆ. ನಾಲ್ವರು ಆರೋಪಿಗಳು ತಮಿಳುನಾಡು ಮೂಲದವರಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದಾರೆ.

ನಾಲ್ವರು ತಮಿಳುನಾಡಿನಿಂದ ನಗರಕ್ಕೆ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಈ ಪೈಕಿ ಮೋಹನ್‌ ಕುಮಾರ್‌ ಮತ್ತು ಅಮೃತ್‌ ಕುಮಾರ್‌ ತಮಿಳುನಾಡಿನಲ್ಲಿ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡು ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ದುಶ್ಚಟಗಳ ದಾಸರಾಗಿರುವ ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳ ಕಳ್ಳತನ, ಸುಲಿಗೆ ಸೇರಿದಂತೆ ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಕದ್ದ ಬೈಕ್‌ಗಳು ತಮಿಳುನಾಡಿನ ಹಳ್ಳಿಗಳಲ್ಲಿ ಮಾರಾಟ:

ಆರೋಪಿಗಳು ತಮಿಳುನಾಡಿನಿಂದ ಬಾಡಿಗೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಬಳಿಕ ಒಬ್ಬೊಬ್ಬರು ಒಂದೊಂದು ಪ್ರದೇಶದಲ್ಲಿ ಇಳಿದುಕೊಂಡು ಮನೆ ಎದುರು, ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದುಬಾರಿ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡಿಕೊಂಡು ತಮಿಳುನಾಡಿಗೆ ಪರಾರಿಯಾಗುತ್ತಿದ್ದರು.

ಬಳಿಕ ತಮಿಳುನಾಡಿನ ವೇಲೂರು ಗುಡಿಯಾತ್ತಂ, ಮಾದನೂರು, ವಡ್ಡರೆಡ್ಡಿಪಾಳ್ಯ, ಸೇಂಗೋಡ್ರಂ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡಿ ವ್ಯಯಿಸುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ನಗರಕ್ಕೆ ಬಂದು ಕಳವು ಮಾಡಿ ಪರಾರಿಯಾಗುತ್ತಿದ್ದರು.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಸ್ಥಳೀಯ ಪೊಲೀಸರ ಸಹಕಾರ ಪಡೆದು 31 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನದ ಸರ ಸುಲಿಗೆ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article