ಜಾನುವಾರು ಸಂರಕ್ಷಣೆ ಹೆಸರಲ್ಲಿ ವಸೂಲಿ : 7 ಮಂದಿ ಬಂಧನ

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 12:37 PM IST
ಜಾನುವಾರು ಸಂರಕ್ಷಣೆ ಹೆಸರಲ್ಲಿ ವಸೂಲಿ: 7 ಮಂದಿ ಬಂಧನ | Kannada Prabha

ಸಾರಾಂಶ

ಜಾನುವಾರು ಸಂರಕ್ಷಣೆ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಏಳು ಮಂದಿಯನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

 ಹುಣಸೂರು :  ಜಾನುವಾರು ಸಂರಕ್ಷಣೆ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಏಳು ಮಂದಿಯನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಹಿಂದೂ ರಾಷ್ಟ್ರ ರಕ್ಷಣಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷರಾದ ಬೆಂಗಳೂರು ಉತ್ತರಹಳ್ಳಿಯ ರಾಮಕೃಷ್ಣ, ಬೆಂಗಳೂರಿನ ವಿವಿಧ ಬಡಾವಣೆ ನಿವಾಸಿಗಳಾದ ಶಿವಕುಮಾರ್, ಲಿಂಗರಾಜು, ಕಿಶೋರ್, ಪ್ರೇಮಕುಮಾರ್, ಪುಷ್ಪಲತಾ ಮತ್ತು ಕೆ.ಆರ್. ಪೇಟೆ ತಾಲೂಕಿನ ಮಾರಗೌಡನಹಳ್ಳಿಯ ಸ್ವಾಮಿ ಬಂಧಿತ ಆರೋಪಿಗಳು.

ಆರೋಪಿಗಳು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಹಿಂದೂ ಸಂಘಟನೆ ಹೆಸರಿನಲ್ಲಿ ಜಾನುವಾರು ಸಂರಕ್ಷಣೆ ಮಾಡುವ ನೆಪದಲ್ಲಿ ಜಾನುವಾರು ಸಾಗಿಸುವ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು.

ಹುಣಸೂರು ತಾಲೂಕಿನ ರತ್ನಪುರಿಯ ಕಿರಣ್ ಬುಧವಾರ ಚುಂಚನಕಟ್ಟೆ ಸಂತೆಯಲ್ಲಿ ಮೂರು ಜಾನುವಾರುಗಳನ್ನು ಖರೀದಿಸಿ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ತಾಲೂಕಿನ ಕಟ್ಟೆಮಳಲವಾಡಿ ಬಳಿ ಅಡ್ಡಗಟ್ಟಿ ಕಸಾಯಿಖಾನೆಗೆ ಜಾನುವಾರು ಸಾಗಿಸುತ್ತಿದ್ದೀರಾ ಎಂದು ಚಾಲಕ ಕಿರಣ್‌ಗೆ ಬೆದರಿಸಿ 25 ಸಾವಿರಕ್ಕೆ ಬೇಡಿಕೆ ಇರಿಸಿದ್ದಾರೆ.

ನಾನು ವ್ಯವಸಾಯಕ್ಕಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದೇನೆಂದು ಹೇಳಿದರೂ ಕೇಳದೆ ಕೊನೆಗೆ 20 ಸಾವಿರ ಕೊಟ್ಟರೆ ಬಿಡುತ್ತೇವೆ. ಇಲ್ಲದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಜನ ಜಮಾವಣೆಗೊಂಡು, ಆರೋಪಿಗಳ ವಿರುದ್ಧ ತಿರುಗಿ ಬಿದ್ದು ತರಾಟೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳ ಆಟಾಟೋಪ ಬಯಲಾಗಿದೆ.

ಈ ಸಂಬಂಧ ಕಿರಣ್ ನೀಡಿದ ದೂರಿನ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

PREV
Read more Articles on

Recommended Stories

ಖಿನ್ನತೆಗೆ ಒಳಗಾಗಿ ಕಾವೇರಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಮದುವೆ ಆಗುವುದಾಗಿ ಅತ್ಯಾ*ರ : ಮಾಜಿ ಶಾಸಕರ ವಿರುದ್ಧ ಎಫ್‌ಐಆರ್‌