ಕೋಚಿಂಗ್ ಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡಿ ವಂಚಿಸಿದ ಪದವೀಧರನೊಬ್ಬನ ಬಂಧನ

KannadaprabhaNewsNetwork | Updated : Dec 07 2024, 04:32 AM IST

ಸಾರಾಂಶ

ವೃತ್ತಿಪರ ಕೋರ್ಸ್‌ಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡಿ ವಂಚಿಸಿದ ಪದವೀಧರನೊಬ್ಬನನ್ನು ಆಗ್ನೇಯ ವಿಭಾಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ವೃತ್ತಿಪರ ಕೋರ್ಸ್‌ಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡಿ ವಂಚಿಸಿದ ಪದವೀಧರನೊಬ್ಬನನ್ನು ಆಗ್ನೇಯ ವಿಭಾಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ರಾಜ್ಯ ಮೂಲದ ನಿತೇಶ್ ಯಾದವ್ ಬಂಧಿತನಾಗಿದ್ದು, ಆರೋಪಿಯಿಂದ ಕೆಲ ದಾಖಲೆಗಳು ಹಾಗೂ ಹಣ ಜಪ್ತಿ ಮಾಡಲಾಗಿದೆ. ತನ್ನ ಗ್ರಾಹಕರಿಂದ ಹಣ ಪಡೆದು ಮರಳಿಸದೆ ವಂಚಿಸಿರುವ ಬಗ್ಗೆ ಸಿಇಎನ್‌ ಠಾಣೆಗೆ ಕ್ಯಾಶ್ ಫ್ರೀ ಪೇಮೆಂಟ್ಸ್ ಕಂಪನಿಯ ಅಧಿಕಾರಿಗಳು ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಇನ್‌ಸ್ಪೆಕ್ಟರ್ ಪಿ.ಎನ್‌.ಈಶ್ವರಿ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಹರಿಯಾಣದಲ್ಲಿ ಆರೋಪಿಯನ್ನು ಸೆರೆ ಹಿಡಿದು ನಗರಕ್ಕೆ ಕರೆ ತಂದಿದೆ.

ಪದವಿ ಓದಿದ್ದ ನಿತೇಶ್ ಯಾದವ್‌, ಸುಲಭವಾಗಿ ಹಣ ಸಂಪಾದನೆಗೆ ಆನ್‌ಲೈನ್ ಕೋಚಿಂಗ್ ನೀಡುವ ‘ನೀತಿರೇಮ್ಸ್‌ ಸಲೂಷನ್ಸ್‌ ಪ್ರೈ,ಲಿಮಿಟೆಡ್‌ (ಸಿವೈಇಎನ್‌) ಎಂಬ ಕಂಪನಿಯನ್ನು ತೆರೆದಿದ್ದ. ಈ ಕಂಪನಿ ಮೂಲಕ ಐಐಟಿ, ಜೆಇಇ ಮತ್ತು ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡುವುದಾಗಿ ಆತ ಪ್ರಕಟಿಸಿದ್ದ. ಅಲ್ಲದೆ ಇದಕ್ಕಾಗಿ ಕ್ರ್ಯಾಕ್‌ ಯೂವರ್ ಎಕ್ಸಾಂ ಎಂಬ ವೆಬ್‌ಸೈಟ್ ಹಾಗೂ ಡೊಮೈನ್‌ ನೇಮ್‌ ಅನ್ನು ಗೂ-ಡ್ಯಾಡಿಯಿಂದ ಖರೀದಿಸಿ ಕ್ಯಾಶ್‌ ಫ್ರೀ ಪೇಮೆಂಟ್ಸ್ ಕಂಪನಿಗೆ ₹15 ಲಕ್ಷವನ್ನು ಯಾದವ್ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವೈಬ್‌ಸೈಟ್‌ ಅಥವಾ ಆಪ್ಲಿಕೇಷನ್ಸ್‌ನಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್‌, ಯುಪಿಐ ಮತ್ತು ಇತರೆ ಹಣ ಸ್ವೀಕಾರ್ಹ ಪಾವತಿ ವಿಧಾನಗಳನ್ನು ಬಳಸಿಕೊಂಡು ಆನ್‌ ಲೈನ್ ಪಾವತಿಗಳನ್ನು ಸ್ವೀಕರಿಸುವಲ್ಲಿ ಅಂಥ ವ್ಯಾಪಾರಿ ಹಾಗೂ ಸಂಸ್ಥೆಗಳ ಗ್ರಾಹಕರಿಗೆ ಕ್ಯಾಶ್ ಫ್ರೀ ಪೇಮೆಂಟ್ಸ್ ಸಂಸ್ಥೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಅಂತೆಯೇ ಯಾದವ್‌ನ ಸಿವೈಇಎನ್‌ ಕಂಪನಿಗೆ ಕ್ಯಾಶ್‌ ಫ್ರೀ ಕಂಪನಿ ಮಧ್ಯವರ್ತಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.+++ಹೀಗಾಗಿ ಆರೋಪಿಯಿಂದ ಕೋಚಿಂಗ್ ಸಲುವಾಗಿ ಕೆಲ ಅಭ್ಯರ್ಥಿಗಳು, ಕ್ಯಾಶ್‌ ಫ್ರೀ ಮೂಲಕ ಹಣ ಪಾವತಿಸಿದ್ದರು. ಆದರೆ ಹಣ ವಸೂಲಿ ಮಾಡಿದ ಬಳಿಕ ಆತ ಯಾವುದೇ ಕೋಚಿಂಗ್‌ ನೀಡದೆ ವಂಚಿಸಿದ್ದ. ಕೊನೆಗೆ ತಮಗೆ ಸಿವೈಇಎನ್ ಕಂಪನಿಯಿಂದ ಸೇವೆ ಸಿಗದ ಕಾರಣ ನೀಡಿಲ್ಲವೆಂದು ಕ್ಯಾಶ್ ಫ್ರೀಂ ಕಂಪನಿಗೆ ತಿಳಿಸಿ ತಾವು ಪಾವತಿಸಿದ್ದ ಹಣವನ್ನು ಆ ಅಭ್ಯರ್ಥಿಗಳು ಮರಳಿ ಪಡೆದಿದ್ದರು. ಆದರೆ ಕ್ಯಾಶ್‌ ಫ್ರೀ ಕಂಪನಿಗೆ ಆರೋಪಿ ಹಣ ಕೊಡದೆ ಟೋಪಿ ಹಾಕಿದ್ದ. ಈ ಬಗ್ಗೆ ಆ ಕಂಪನಿ ಅಧಿಕಾರಿಗಳು ಪೊಲೀಸರಿಗೆ ದೂರು ಸಲ್ಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Share this article