ನವದೆಹಲಿ: ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದ್ದ ನಕಲಿ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಲಾಗಿದ್ದು, ಈತನನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಕಲಿ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಏಜೆಂಟ್ ಸಾದಿಕುಲ್ಲಾ ಬೇಗ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಈತ ಗುರುವಾರ ದುಬೈನಿಂದ ಬಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದನ್ನು ವಿಮಾನದ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸಾದಿಕುಲ್ಲಾನನ್ನು ಬಂಧಿಸಿ, ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಜಂಟಿ ಪೊಲೀಸ್ ಕಮಿಷನರ್ ಉಷಾ ರಂಗನಾನಿ ಹೇಳಿದ್ದಾರೆ.ನಂತರ ಆರೋಪಿಯನ್ನು ವಿಚಾರಣೆ ಮಾಡಿದಾಗ ಆತನಿಗೆ ದುಬೈ ಮೂಲದ ಏಜೆಂಟ್ ಒಬ್ಬರಿಂದ ವೀಸಾ ಸ್ಟಿಕ್ಕರ್‌ಗಳು ಸಿಗುತ್ತಿದ್ದು, ಜನರಿಂದ ಸುಲಭವಾಗಿ ಹಣ ಪಡೆಯಲು ಈ ದಂಧೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನ ಬ್ಯಾಂಕ್ ಖಾತೆಯಲ್ಲಿ ಕೇವಲ ₹1.5 ಲಕ್ಷ ಇದ್ದು, ಉಳಿದ ಹಣವನ್ನು ತನ್ನ ಸಂಬಂಧಿಕರಿಗೆ ವರ್ಗಾಯಿಸಿರುವುದಾಗಿಯೂ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?:ಲೂಧಿಯಾನಾ ಮೂಲಕ ಹರ್ವಿಂದರ್ ಸಿಂಗ್ ಧನೊವಾ ಎಂಬುವವರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆನಡಾದ ನಕಲಿ ವೀಸಾದೊಂದಿಗೆ ಕೆಲವು ತಿಂಗಳ ಹಿಂದೆ ಸಿಕ್ಕಿಬಿದ್ದಿದ್ದರು. ಅವರನ್ನು ವಿಚಾರಣೆ ಮಾಡಿದಾಗ ಮುಸ್ಕಾನ್ ಅಲಿಯಾಸ್ ಮನ್‌ಪ್ರೀತ್ ಕೌರ್ ಅವರಿಗೆ ಹಣ ನೀಡಿ ವೀಸಾ ಪಡೆದಿರುವುದಾಗಿ ತಿಳಿಸಿದ್ದರು. ಇದರ ಹಿಂದೆ ಒಂದು ಜಾಲವೇ ಕೆಲಸ ಮಾಡುತ್ತಿರುವುದನ್ನು ಮನಗಂಡ ಪೊಲೀಸರು, ಮನ್‌ಪ್ರೀತ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಸಾದಿಕ್ ಉಲ್ಲಾಗೆ ₹5 ಲಕ್ಷ ನೀಡಿ ವೀಸಾ ತರಿಸಿಕೊಂಡಿದ್ದಾಗಿ ಆತ ಬಾಯಿಬಿಟ್ಟಿದ್ದ. ಬಳಿಕ ಸಾದಿಕ್ ಉಲ್ಲಾನಿಗೆ ಬಲೆ ಬೀಸಿದ್ದ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು.