ಸರ್ಕಾರಿಂದ ಮಂಜೂರಾಗಿದ್ದ ಒಂದು ಎಕರೆ ಮಾರಾಟ ಮಾಡಿದ ಭೂಮಿ ಮರಳಿ ಕೇಳಿದ ಕುಟುಂಬ ಸದಸ್ಯರಿಗೆ ₹25000 ದಂಡ

KannadaprabhaNewsNetwork |  
Published : Apr 11, 2025, 01:30 AM ISTUpdated : Apr 11, 2025, 04:25 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಸರ್ಕಾರಿಂದ ಮಂಜೂರಾಗಿದ್ದ ಒಂದು ಎಕರೆ ಜಮೀನನ್ನು ವ್ಯಕ್ತಿಯೊಬ್ಬನಿಗೆ ಮಾರಿದ ಬಳಿಕವೂ ಜಮೀನು ಮೇಲಿನ ಹಕ್ಕು ಪುನರ್‌ ಸ್ಥಾಪಿಸಿ ಆದೇಶಿಸುವಂತೆ ಕೋರಿದ್ದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವೊಂದರ ಸದಸ್ಯರಿಗೆ ಹೈಕೋರ್ಟ್‌ ₹25 ಸಾವಿರ ದಂಡ ವಿಧಿಸಿದೆ.

  ಬೆಂಗಳೂರು : ಸರ್ಕಾರಿಂದ ಮಂಜೂರಾಗಿದ್ದ ಒಂದು ಎಕರೆ ಜಮೀನನ್ನು ವ್ಯಕ್ತಿಯೊಬ್ಬನಿಗೆ ಮಾರಿದ ಬಳಿಕವೂ ಜಮೀನು ಮೇಲಿನ ಹಕ್ಕು ಪುನರ್‌ ಸ್ಥಾಪಿಸಿ ಆದೇಶಿಸುವಂತೆ ಕೋರಿದ್ದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವೊಂದರ ಸದಸ್ಯರಿಗೆ ಹೈಕೋರ್ಟ್‌ ₹25 ಸಾವಿರ ದಂಡ ವಿಧಿಸಿದೆ.

ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದ ಮೃತ ನಿವಾಸಿ ವೆಂಕಟಸ್ವಾಮಿ ಅವರ ವಾರಸುದಾರರಿಗೆ ದಂಡ ವಿಧಿಸಿ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದೆ. ದಂಡದ ಮೊತ್ತವನ್ನು 6 ವಾರಗಳಲ್ಲಿ ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿಗೆ ಪಾವತಿಸಬೇಕು. ತಪ್ಪಿದರೆ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಈ ಮೊತ್ತವನ್ನು ಮೇಲ್ಮನವಿದಾರರಿಂದ ವಸೂಲಿ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಸಾಮಾಜಿಕ ಮತ್ತು ಅರ್ಥಿಕವಾಗಿ ತುಳಿತಕ್ಕೊಳಗಾದವರಿಗೆ ಸಹಾಯ ಹಸ್ತ ನೀಡಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ಪರಾಭಾರೆ ನಿಷೇಧ) ಕಾಯ್ದೆ (ಪಿಟಿಸಿಎಲ್) ಜಾರಿಗೊಳಿಸಲಾಗಿದೆ. ಪರಿಶಿಷ್ಟ ವರ್ಗದವರಿಗೆ ಮಂಜೂರಾದ ಜಮೀನು ಪರಾಭಾರೆ ನಿಷೇಧವಿದೆ. ಆದರೂ ಆ ಜಮೀನು ಕಬಳಿಸಲು ಶ್ರೀಮಂತರು ಹಾಗೂ ಪ್ರಬಲ ವರ್ಗದವರು ಮಂಜೂರಾತಿದಾರರ ಬಡತನ ಮತ್ತು ಅವಿದ್ಯಾವಂತಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪಿಟಿಸಿಎಲ್ ಕಾಯ್ದೆಯಡಿ ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ಶೀಘ್ರ ವಿಲೇವಾರಿಗೆ ತಕ್ಷಣವೇ ಅಧಿಕಾರಿಗಳು ಮುಂದಾಗುವುದನ್ನು ಖಾತರಿಪಡಿಸಲು ಸರ್ಕಾರ ಅಗತ್ಯ ಕಾರ್ಯ ವಿಧಾನ ಜಾರಿಗೊಳಿಸಬೇಕು ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣ ಹಿನ್ನೆಲೆ:

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸರ್ಜಾಪುರದ ಸಿಂಗೇನ ಅಗ್ರಹಾರ ಗ್ರಾಮದಲ್ಲಿ ಒಂದು ಎಕರೆ ಭೂಮಿಯನ್ನು 1982ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚಿಕ್ಕವೆಂಕಟಮ್ಮ ಎಂಬುವರಿಗೆ ಸರ್ಕಾರ ಮಂಜೂರು ಮಾಡಿತ್ತು. ಈ ಜಮೀನನ್ನು ಚಿಕ್ಕವೆಂಕಟಮ್ಮ ಅವರು ಸುಧಾಕರ್ ಎಂಬುವವರಿಗೆ 1996ರಲ್ಲಿ ಮಾರಾಟ ಮಾಡಿದ್ದರು. ಇದಾದ ನಂತರ ಸುಧಾಕರ್ ಅವರು ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅನುಮತಿ ಪಡೆದ ಬಳಿಕ ತಿಪ್ಪಯ್ಯ ಎಂಬುವರಿಗೆ 2004ರಲ್ಲಿ ಮಾರಾಟ ಮಾಡಿದ್ದರು. ನಂತರ ಚಿಕ್ಕವೆಂಕಟಮ್ಮ ಅವರ ಪುತ್ರ ವೆಂಕಟಸ್ವಾಮಿ ಅವರು ತಮ್ಮ ತಾಯಿಗೆ ಮಂಜೂರಾಗಿದ್ದ ಜಮೀನನ್ನು ಪುನಃ ತಮ್ಮ ಹೆಸರಿಗೆ ಮರುಸ್ಥಾಪನೆ ಮಾಡುವಂತೆ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಸರ್ಕಾರ ಆ ಅರ್ಜಿ ವಜಾಗೊಳಿಸಿದ್ದರಿಂದ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ಏಕ ಸದಸ್ಯ ಪೀಠ ವಜಾಗೊಳಿಸಿದ್ದರಿಂದ ವೆಂಕಟಸ್ವಾಮಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ವೆಂಕಟಸ್ವಾಮಿ ಮೃತಪಟ್ಟಿದ್ದರು. ಅವರ ವಾರಸುದಾರರು ಪ್ರಕರಣವನ್ನು ಮುಂದುವರಿಸಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌