ಗೃಹ ಸಚಿವ ಪರಮೇಶ್ವರ್ ಅವರು ನಮ್ಮ ಮನೆಗೆ ಬರುವ ಮುನ್ನ ಯಾದಗಿರಿ ಶಾಸಕ ಮತ್ತು ಅವರ ಮಗನನ್ನು ಬಂಧಿಸಬೇಕು ಎಂದು ಮೃತ ಪಿಎಸ್‌ಐ ಪರಶುರಾಮ್ ಕುಟುಂಬಸ್ಥರು ಕೊಪ್ಪಳ ಎಸ್ಪಿ ಡಾ.ರಾಮ್ ಅವರಿಗೆ ಮಂಗಳವಾರ ಒತ್ತಾಯಿಸಿದರು.
ಕಾರಟಗಿ: ಗೃಹ ಸಚಿವ ಪರಮೇಶ್ವರ್ ಅವರು ನಮ್ಮ ಮನೆಗೆ ಬರುವ ಮುನ್ನ ಯಾದಗಿರಿ ಶಾಸಕ ಮತ್ತು ಅವರ ಮಗನನ್ನು ಬಂಧಿಸಬೇಕು ಎಂದು ಮೃತ ಪಿಎಸ್‌ಐ ಪರಶುರಾಮ್ ಕುಟುಂಬಸ್ಥರು ಕೊಪ್ಪಳ ಎಸ್ಪಿ ಡಾ.ರಾಮ್ ಅವರಿಗೆ ಮಂಗಳವಾರ ಒತ್ತಾಯಿಸಿದರು.
ತಾಲೂಕಿನ ಸೋಮನಾಳ ಗ್ರಾಮದ ಮನೆಯಲ್ಲಿ ಮಂಗಳವಾರ ಪರಶುರಾಮ್ ನಿಧನದ ಐದನೇ ದಿನದ ಕಾರ್ಯವನ್ನು ಅವರ ಕುಟುಂಬಸ್ಥರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ಕೆ ರಾಯಚೂರಿನಿಂದ ಅವರ ಪತ್ನಿ ಶ್ವೇತಾ ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮನೆಗೆ ಆಗಮಿಸಿದ ಎಸ್ಪಿ ಅವರು, ಬುಧವಾರ ಪರಮೇಶ್ವರ್ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದರು. ಆಗ ಎಸ್‌ಪಿ ಅವರು, ‘ಗೃಹ ಸಚಿವರು ನಿಮ್ಮ ಸಮಸ್ಯೆ ಆಲಿಸಲು ಬರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆ ಸಂದರ್ಭದಲ್ಲಿ ಗಲಾಟೆ ಮಾಡಬೇಡಿ’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೃತ ಪಿಎಸ್‌ಐ ಕುಟುಂಬಸ್ಥರು ‘ನಾವು ಅವರನ್ನು ನಮ್ಮ ಮನೆಗೆ ಬರಬೇಡಿ ಎನ್ನಲ್ಲ. ಆದರೆ, ಇಲ್ಲಿಗೆ ಬರುವ ಮುನ್ನ ಶಾಸಕ ಚನ್ನಾರೆಡ್ಡಿ ಮತ್ತವರ ಮಗನನ್ನು ಬಂಧಿಸಬೇಕೆಂದು’ ಎಂದು ಏರು ಧ್ವನಿಯಲ್ಲಿ ಹೇಳಿದರು.
ಇದೇ ವೇಳೆ ಸ್ಥಳದಲ್ಲಿದ್ದ ದಲಿತ ಸಂಘಟನೆಗಳ ಪದಾಧಿಕಾರಿಗಳೂ ಆಕ್ರೋಶಭರಿತರಾಗಿ ಮಾತನಾಡಿದರು. ಎಲ್ಲರಿಗೂ ಸಮಾಧಾನದಿಂದಲೇ ಉತ್ತರಿಸಿದ ಎಸ್ಪಿ, ಮನೆಯೊಳಗೆ ತೆರಳಿ, ಮೃತ ಪಿಎಸ್‌ಐ ತಾಯಿ ಮತ್ತು ಪತ್ನಿ ಜೊತೆಗೂ ಮಾತುಕತೆ ನಡೆಸಿದರು.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.