ಬಂಧನ ಭೀತಿ: ಅತುಲ್‌ ಪತ್ನಿ ಕುಟುಂಬಸ್ಥರು ಪರಾರಿ - ಮನೆಗೆ ಬೀಗ ಜಡಿದು ನಾಪತ್ತೆಯಾದ ಆರೋಪಿಗಳು

Published : Dec 13, 2024, 10:10 AM IST
Atul Subhash'

ಸಾರಾಂಶ

ಬಿಹಾರ ಮೂಲದ ಟೆಕಿ ಅತುಲ್‌ ಸುಭಾಷ್‌ (34) ಆತ್ಮಹತ್ಯೆ ಪ್ರಕರಣ ಸಂಬಂಧ ಮಾರತಹಳ್ಳಿ ಠಾಣೆ ಪೊಲೀಸರು ಉತ್ತರಪ್ರದೇಶ ತಲುಪಿರುವ ವಿಚಾರ ತಿಳಿದ ಕೂಡಲೇ ಬಂಧನ ಭೀತಿಯಲ್ಲಿರುವ ಅತುಲ್‌ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದ ಸದಸ್ಯರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.

ಬೆಂಗಳೂರು : ಬಿಹಾರ ಮೂಲದ ಟೆಕಿ ಅತುಲ್‌ ಸುಭಾಷ್‌ (34) ಆತ್ಮಹತ್ಯೆ ಪ್ರಕರಣ ಸಂಬಂಧ ಮಾರತಹಳ್ಳಿ ಠಾಣೆ ಪೊಲೀಸರು ಉತ್ತರಪ್ರದೇಶ ತಲುಪಿರುವ ವಿಚಾರ ತಿಳಿದ ಕೂಡಲೇ ಬಂಧನ ಭೀತಿಯಲ್ಲಿರುವ ಅತುಲ್‌ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದ ಸದಸ್ಯರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.

ನಗರದ ಮಾರತಹಳ್ಳಿ ಪೊಲೀಸರ ತಂಡ ಉತ್ತರ ಪ್ರದೇಶ ತಲುಪಿದ್ದು, ಸ್ಥಳೀಯ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯ ಪೊಲೀಸರ ನೆರವಿನೊಂದಿಗೆ ನಿಖಿತಾ ಸಿಂಘಾನಿಯಾ ಮನೆಗೆ ತೆರಳಿದಾಗ ನಿಖಿತಾ ಹಾಗೂ ಆಕೆಯ ಕುಟುಂಬದ ಸದಸ್ಯರು ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ. ಬಂಧನ ಭೀತಿಯಲ್ಲಿ ಅವರು ತಲೆಮರೆಸಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯ ಉತ್ತರ ಪ್ರದೇಶದಲ್ಲೇ ಬೀಡು ಬಿಟ್ಟಿರುವ ಮಾರತಹಳ್ಳಿ ಪೊಲೀಸರ ತಂಡ, ನಿಖಿತಾ ಸಿಂಘಾನಿಯಾ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಿ, ತಲಾಶ್‌ ನಡೆಸುತ್ತಿದ್ದಾರೆ.

 ಯಾರನ್ನೂ ವಶಕ್ಕೆ ಪಡೆದಿಲ್ಲ: 

ಉತ್ತರ ಪ್ರದೇಶದ ಸ್ಥಳೀಯ ಸುದ್ದಿ ವಾಹಿನಿಗಳು, ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಸಹೋದರನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡುತ್ತಿವೆ. ಈ ಸುದ್ದಿಯನ್ನು ತಳ್ಳಿ ಹಾಕಿರುವ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಶಿವಕುಮಾರ್‌, ಈವರೆಗೂ ಯಾರೊಬ್ಬರನ್ನೂ ನಮ್ಮ ಪೊಲೀಸರು ಉತ್ತರಪ್ರದೇಶದಲ್ಲಿ ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 ಪ್ರಕರಣದ ಹಿನ್ನೆಲೆ: 

ಅತುಲ್‌ ಸುಭಾಷ್‌ ಮತ್ತು ನಿಖಿತಾ 5 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಗಂಡು ಒಂದು ಮಗುವಿದೆ. ಅತುಲ್‌ ಮಾರತಹಳ್ಳಿ ಮಂಜುನಾಥ ಲೇಔಟ್‌ನ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹದ ಕಾರಣಕ್ಕೆ ಕಳೆದ 3 ವರ್ಷಗಳಿಂದ ಉತ್ತರಪ್ರದೇಶದ ತವರು ಮನೆಯಲ್ಲಿದ್ದ ನಿಖಿತಾ, ಪತಿ ವಿರುದ್ಧ 9ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದರು. ಈ ನಡುವೆ ಡಿ.9ರಂದು ಅತುಲ್‌ 26 ಪುಟಗಳ ಸುದೀರ್ಘ ಮರಣಪತ್ರ ಬರೆದಿಟ್ಟು ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡಿದ್ದರು. ಈ ಸಂಬಂಧ ಅತುಲ್‌ ಸಹೋದರ ನೀಡಿದ ದೂರಿನ ಮೇರೆಗೆ ಮಾರತಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅತುಲ್‌ಗೆ ನ್ಯಾಯಕ್ಕಾಗಿ ಪ್ರತಿಭಟನೆ

ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ ಖಂಡಿಸಿ, ಅತುಲ್‌ ಸುಭಾಷ್‌ಗೆ ನ್ಯಾಯ ದೊಕಿಸುವಂತೆ ಆಗ್ರಹಿಸಿ ಸೇವ್‌ ಇಂಡಿಯಾ ಫ್ಯಾಮಿಲಿ ಫೌಂಡೇಶನ್‌ ನೇತೃತ್ವದಲ್ಲಿ ನೂರಾರು ಐಟಿ-ಬಿಟಿ ಉದ್ಯೋಗಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸದಸ್ಯರು ಸರ್ಜಾಪುರ ಮುಖ್ಯರಸ್ತೆಯ ಇಕೋ ಸ್ಪೇಸ್‌ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಜಸ್ಟೀಸ್ ಈಸ್‌ ಡ್ಯೂಸ್‌ ಎಂಬ ಭಿತ್ತಿಪತ್ರ ಹಿಡಿದು, ಟಿ ಶರ್ಟ್‌ ಧರಿಸಿ ಘೋಷಣೆ ಕೂಗಿದರು. ದೇಶದಲ್ಲಿ ಕೆಲವು ಕಾನೂನುಗಳು ದುರ್ಬಳಕೆ ಆಗುತ್ತಿವೆ. ಅಮಾಯಕರು ಕಿರುಕುಳ, ಹಿಂಸೆ ಅನುಭವಿಸುತ್ತಿದ್ದಾರೆ. ಅತುಲ್‌ ಸೇರಿ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅತುಲ್‌ಗೆ ಅನ್ಯಾಯವಾಗಿದೆ. ಆತನ ಸಾವಿಗೆ ನ್ಯಾಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದೇ ವೇಳೆ ಮುಂಬತ್ತಿ ಹಿಡಿದು ಅತುಲ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು. 

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ